ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ | 9 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಮಾಡಿದ ಹೈಟೆಕ್ ಕಳ್ಳ ಸಂಪ್ಯ ಪೊಲೀಸರ ಬಲೆಗೆ
ಪುತ್ತೂರು: ಕಳವು ಮತ್ತು ದರೋಡೆಗೆ ಸಂಬಂಧಿಸಿ ಸಂಪ್ಯ, ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ, ಕಡಬ, ಬೆಳ್ತಂಗಡಿ, ಮೂಡಬಿದ್ರೆ, ಕುಂಬ್ಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಕೇರಳದಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ.
ಮೂಲತಃ ಕಡಬ ತಾಲೂಕಿನ ಕೊಯ್ಲ ಫಾರ್ಮ್ ಬಳಿಯ ನಿವಾಸಿಯಾಗಿರುವ ಇಬ್ರಾಹಿಂ ಖಲಂದರ್ ಬಂಧಿತ ಆರೋಪಿ. 2019ರಲ್ಲಿ ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿ ಈತನ ವಿರುದ್ಧ ಕೇಸು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಸಂಪ್ಯ ಪೊಲೀಸರು ಆರೋಪಿಯ ಪತ್ತೆ ಕಾರ್ಯ ಆರಂಭಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಅವರ ನಿರ್ದೇಶನದಂತೆ ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಮತ್ತು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರ ನಿರ್ದೇಶನದಲ್ಲಿ ಗ್ರಾಮಾಂತರ ಠಾಣಾ ಉದಯರವಿ ಮತ್ತು ಪ್ರೊಬೆಷನರಿ ಎಸ್.ಐ ಶ್ರೀಕಾಂತ್ ರಾಥೋಡ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇರಳದ ಬೇಕಲ್‌ನ ಚೆಟ್ಟಂಚಾಲ್‌ನ ಆರೋಪಿ ಇಬ್ರಾಹಿಂ ಖಲಂದರ್ ಅವರನು ನ.1ರಂದು ಬಂಧಿಸಿ ಕರೆತಂದಿದ್ದಾರೆ. ಬಂಧಿತ ಆರೋಪಿಯನ್ನು ನ.2ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವಿವಿಧ ಠಾಣೆಯಲ್ಲಿ ಹಲವು ಪ್ರಕರಣ: ಬಂಧಿತ ಆರೋಪಿ ಇಬ್ರಾಹಿಂ ಖಲಂದರ್ ಅವರನ್ನು ಪೊಲೀಸರು ವಿಚಾರಣೆ ಮಾಡಿದಾಗ ಸಂಪ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಇತರ ಠಾಣೆಗಳ ಸರಹದ್ದಿನಲ್ಲೂ ಕಳವು ಮಾಡಿರುವುದನ್ನು ಬಾಯಿ ಬಿಟ್ಟಿದ್ದ. ಬಳಿಕ ವಿವಿಧ ಠಾಣೆಗಳಲ್ಲಿ ವಿಚಾರಿಸಿದಾಗ ಆರೋಪಿ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಮೂರು ಕಳವು ಪ್ರಕರಣ, ಉಪ್ಪಿನಂಗಡಿಯಲ್ಲಿ 1 ಕಳವು, ಕಡಬದಲ್ಲಿ 1 ಕಳವು, ಬಂಟ್ವಾಳದಲ್ಲಿ 1 ಕಳವು ಬೆಳ್ತಂಗಡಿಯಲ್ಲಿ 1 ಕಳವು, ಮೂಡಬಿದ್ರೆಯಲ್ಲಿ ದರೋಡೆ ಪ್ರಕರಣ ಮತ್ತು ಕುಂಬ್ಳೆಯಲ್ಲಿ 1 ಕಳವು ಪ್ರಕರಣ ಇರುವುದು ಬೆಳಕಿಗೆ ಬಂದಿದೆ.
ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ: ಆರೋಪಿ ಇಬ್ರಾಹಿಂ ಖಲಂದರ್ ಕೇರಳದ ಬೇಕಲ್ ಸಮೀಪ ಹೊಟೇಲ್‌ವೊಂದರಲ್ಲಿ ಕೆಲಸ ಮಾಡುತ್ತಿರುವುದು ಪೊಲೀಸರ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿತ್ತು. ಹೊಟೇಲ್‌ನಿಂದಲೇ ಆರೋಪಿಯನ್ನು ಬಂಧಿಸಿ ಕರೆತರುವಲ್ಲಿ ಸಂಪ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.