12 ಲಕ್ಷ ಹಣತೆಗಳ ಬೆಳಕಿನಲ್ಲಿ ಕಂಗೊಳಿಸಲಿದೆ ಶ್ರೀರಾಮನ ಜನ್ಮಭೂಮಿ ಅಯೋಧ್ಯೆ!! | ಗಿನ್ನಿಸ್ ಪುಟ ಸೇರಲಿದೆ ಈ ಬಾರಿಯ ದೀಪಾವಳಿ
ಖುಷಿಯ ದೀಪಗಳ ಹಬ್ಬ ಮತ್ತೆ ಬಂದಿದೆ. ಭಾರತದಲ್ಲಿ ಆಚರಿಸಲ್ಪಡುವ ಅತ್ಯಂತ ಸಡಗರದ ಹಬ್ಬಗಳಲ್ಲಿ ದೀಪಾವಳಿ ಕೂಡಾ ಒಂದು. ಮನೆ ಮುಂದೆ ದೀಪಗಳನ್ನು ಬೆಳಗಿಸಿ, ಪಟಾಕಿ ಸಿಡಿಸಿ, ಲಕ್ಷ್ಮೀ ಪೂಜೆ, ಗೋಪೂಜೆ ಸೇರಿದಂತೆ ಹಲವು ಪೂಜೆಗಳ ಮೂಲಕ ದೇವರನ್ನು ಅರ್ಚಿಸಿ ಈ ಹಬ್ಬವನ್ನು ಆಚರಿಸುವ ಖುಷಿಯೇ ಬೇರೆ.
ಹೀಗಿರುವಾಗ ಬೆಳಕಿನ ಹಬ್ಬ ದೀಪಾವಳಿ ಈ ಬಾರಿ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ವಿಶೇಷವಾಗಿರಲಿದ್ದು, ಹೊಸ ದಾಖಲೆಯೊಂದನ್ನು ಸೃಷ್ಟಿ ಮಾಡಲಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಮತ್ತಷ್ಟು ಅದ್ಧೂರಿಯಾಗಿ ಆಚರಿಸುವ ಲೆಕ್ಕಚಾರದಲ್ಲಿರುವ ಉತ್ತರ ಪ್ರದೇಶ ಸರ್ಕಾರದ ಗಿನ್ನಿಸ್ ದಾಖಲೆ ಬರೆಯಲು ಮುಂದಾಗಿದೆ.
ಈ ಬಾರಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ದೀಪಾವಳಿ ವಿಶೇಷವಾಗಿರಲಿದ್ದು, 12 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಲು ತಯಾರಿ ನಡೆದಿದೆ. ಈಗಾಗಲೇ ಅಯೋಧ್ಯೆಯ ಕೇಂದ್ರ ಬಿಂದು ರಾಮ್ ಪೌಡಿಯಲ್ಲಿ 9 ಲಕ್ಷ ಮತ್ತು ರಾಮ ಜನ್ಮಭೂಮಿ ಸಂಕೀರ್ಣ ಸೇರಿ ನಗರದ ಬೇರೆ ಬೇರೆ ಭಾಗದಲ್ಲಿ ಮೂರು ಲಕ್ಷ ದೀಪಗಳನ್ನು ಬೆಳಗಲಿದ್ದು ಇದು ಹೊಸ ದಾಖಲೆಯಾಗಲಿದೆ.
ಈಗಾಗಲೇ ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ ತಂಡ ಅಯೋಧ್ಯೆಯ ತಲುಪಿದ್ದು, ಹಣತೆಗಳ ಎಣಿಕೆ ಶುರು ಮಾಡಿದೆ. ನಾಳೆ ಈ ಎಲ್ಲ ದೀಪಗಳು ಬೆಳಗಲಿದ್ದು, ಬಳಿಕ ಅಯೋಧ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಲಿದೆ. ಈ ಹಿಂದೆ 2017 ರಲ್ಲಿ 1,80,000, 2018 ರಲ್ಲಿ 3,01,152, 2019 ರಲ್ಲಿ 5,50,000, 2020 ರಲ್ಲಿ 5,51000 ದೀಪಗಳನ್ನು ಬೆಳಗಲಾಗಿತ್ತು.
2017 ರಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಅಯೋಧ್ಯೆಯಲ್ಲಿ ದೊಡ್ಡ ಮಟ್ಟದ ದೀಪೋತ್ಸವ ಕಾರ್ಯಕ್ರಮ ಆರಂಭಿಸಿದ್ದರು. ಸದ್ಯ ಈ ಸರ್ಕಾರದ ಅವಧಿಯ ಕೊನೆಯ ದೀಪಾವಳಿಯಾಗಿರುವ ಹಿನ್ನಲೆ ಅದ್ಧೂರಿಯಾಗಿ ಆಚರಿಸುವುದು ಮಾತ್ರವಲ್ಲದೇ ಹೊಸ ದಾಖಲೆ ಬರೆಯಲು ನಿರ್ಧರಿಸಿದೆ. ಅಲ್ಲದೇ ಈ ಮೂಲಕ ಮತಗಳ ಕ್ರೂಢೀಕರಣದ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.
ಇನ್ನು ಲಕ್ಷ ದೀಪೋತ್ಸವ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಇಡೀ ಅಯೋಧ್ಯೆ ನಗರ ಸಿಂಗಾರಗೊಂಡಿದ್ದು, ನಗರದ ಪ್ರಮುಖ ಬೀದಿ ಹಾಗೂ ಗೋಡೆಗಳ ಮೇಲೆ ಆಕರ್ಷಕ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ರಾಮಾಯಣದ ವೃತ್ತಾಂತ ಹಾಗೂ ಪ್ರಭು ಶ್ರೀರಾಮ ಹಾಗೂ ಸೀತಾಮಾತೆಯ ಆಕರ್ಷಕ ವರ್ಣಚಿತ್ರಗಳು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
ಇಂದು ದೀಪಾವಳಿ ಸಂಭ್ರಮಾಚರಣೆ ಆರಂಭವಾಗಲಿದ್ದು, ಮೂರು ದಿನಗಳ ಕಾಲ ಅಯೋಧ್ಯೆ ನಗರಿ ಈ ಸಂಭ್ರಮಾಚರಣೆಗೆ ಸಾಕ್ಷಿಯಾಗಲಿದೆ.