ರಾಗಿ ಮೂಟೆಯಲ್ಲಿ ಚಿನ್ನ ನಗದು ಬಚ್ಚಿಟ್ಟ ವೃದ್ದೆ, ಅರಿವಿಲ್ಲದೆ ರಾಗಿ ಮೂಟೆ ಮಾರಿದ ಗಂಡ | ಊರೂರು ಸುತ್ತಿ ಸಾಗಿದ ರಾಗಿ ಮೂಟೆಯೊಳಗಿನ ಸಂಪತ್ತು ಕೊನೆಗೇನಾಯ್ತು?
ಅಮೂಲ್ಯವಾದ ವಸ್ತುಗಳಿಗೆ ಅದರದ್ದೇ ಆದ ಬೆಲೆ ಇದೆ. ಅದನ್ನು ಯಾವುದೇ ಒಬ್ಬ ವ್ಯಕ್ತಿಯು ಜೋಪಾನವಾಗಿಡಲು ಬಯಸುತ್ತಾನೆ.ಇಂದಿನ ಕಾಲದಲ್ಲಿ ಚಿನ್ನಾಭರಣದ ರಕ್ಷಣೆಗಾಗಿ ಬ್ಯಾಂಕ್ ಗಳು,ಲಾಕರ್ ಗಳಿವೆ.ಆದರೆ ಹಿಂದಿನ ಕಾಲದಲ್ಲಿ ಅಡುಗೆ ಮನೆಯ ಯಾವುದೊ ಡಬ್ಬಿಯಲ್ಲಿ, ಬಟ್ಟೆಯ ರಾಶಿಯ ನಡುವಲ್ಲಿ ಚಿನ್ನವನ್ನು ಇಟ್ಟು ಕಳ್ಳರಿಂದ ಕಾಪಾಡುತಿದ್ದರು.
ಇಷ್ಟೆಲ್ಲಾ ವಿವರಣೆ ಯಾಕೆ ಎಂಬ ಪ್ರಶ್ನೆ ಮೂಡಿರಬೇಕಲ್ಲ.? ಹೌದು. ಇದೊಂತರ ಕುತೂಹಲವಾಗಿದೆ ಸ್ಟೋರಿ.ಇಲ್ಲೊಬ್ಬ ವೃದ್ದೆ ಕಳ್ಳರಿಗೆ ಹೆದರಿ ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ರಾಗಿ ಮೂಟೆಯಲ್ಲಿ ಅವಿತಿಟ್ಟಿದ್ದಾರೆ.ವಿಷಯ ಏನಂದ್ರೆ ಈ ರಾಗಿ ಮೂಟೆಯಲ್ಲಿ ಬಚ್ಚಿಡಲಾಗಿದ್ದ ಚಿನ್ನಾಭರಣ ಊರೂರು ಸುತ್ತಿ ಹದಿನೈದು ದಿನಗಳ ಬಳಿಕ ಮತ್ತೆ ವೃದ್ದೆ ಕೈ ಸೇರಿದ್ದೇ ವಿಶೇಷ.ಅಷ್ಟಕ್ಕೂ ಇದಕ್ಕೆ ಏನೆಲ್ಲಾ ಕಾರಣವೆಂದು ನೀವೇ ನೋಡಿ.
ಈ ಘಟನೆ ನಡೆದಿರೋದು ಸಕ್ಕರೆನಾಡು ಮಂಡ್ಯ ಜಿಲ್ಲೆಯ ಕಲ್ಲಿನಾಥಪುರ ಗ್ರಾಮದಲ್ಲಿ.ವೃದ್ದೆ ಲಕ್ಷ್ಮಮ್ಮ ಕಳೆದ 15 ದಿನಗಳ ಹಿಂದೆ ಕಳ್ಳರಿಗೆ ಹೆದರಿ ತಮ್ಮ ಮನೆಯಲ್ಲಿದ್ದ ರಾಗಿ ಮೂಟಿಯಲ್ಲಿ ಸುಮಾರು ನಾಲ್ಕು ಲಕ್ಷ ರೂ ಮೌಲ್ಯದ ಒಂದು ಜೊತೆ ಓಲೆ, ಬ್ರೇಸ್‌ಲೈಟ್ ಮತ್ತು ಚೈನ್ ಗಳನ್ನ ಒಂದು ಪರ್ಸ್ ನಲ್ಲಿ ಇಟ್ಟು ಅವಿತಿಟ್ಟಿದ್ದಾರೆ. ಬಳಿಕ ವೃದ್ದೆ ಲಕ್ಷ್ಮಮ್ಮ ಬೆಂಗಳೂರಿನ ತಮ್ಮ ಮಗಳ ಮನೆಗೆ ಹೊರಟು ಹೋಗಿದ್ದಾರೆ. ಆದ್ರೆ ಇತ್ತ ಲಕ್ಷ್ಮಮ್ಮ ಪತಿ ಕಲ್ಲೇಗೌಡ ಮನೆ ಬಳಿ ಬಂದ ಮೂವರು ಯುವಕರಿಗೆ ರಾಗಿ ಮೂಟೆ ಮಾರಾಟ ಮಾಡಿ ಒಂದಷ್ಟು ಹಣ ಪಡೆದುಕೊಂಡಿದ್ದ.
ನಂತರ ರಾಗಿ ಖರೀದಿಸಿದ ಮೂವರು ಯುವಕರು ಖರೀದಿಸಿದ್ದ ರಾಗಿಯನ್ನ ಬಸರಾಳಿನ ಶ್ರೀನಿವಾಸ ಸೂರಿ ಬಿನ್ನಿ ರೈಸ್ ಮಿಲ್ಲಿಗೆ ಮಾರಾಟ ಮಾಡಿದ್ದರು.ಇದಾದ ಕೆಲ ದಿನಗಳ ಬಳಿಕ ಶೇಖರಣೆಯಾಗಿದ್ದ ರಾಗಿ ಮಾರಟ ಮಾಡಲು ರೈಸ್ ಮಿಲ್ ಮಾಲೀಕರು ಮೂಟೆಯಲ್ಲಿದ್ದ ರಾಗಿಯನ್ನ ರಾಶಿಗೆ ಸುರಿದಿದ್ದರು. ಈ ವೇಳೆ ರಾಗಿ ಮೂಟೆಯಿಂದ ಒಂದು ಪರ್ಸ್ ಮತ್ತು ಆಭರಣಗಳಿದ್ದ ಡಬ್ಬಿ ನೆಲಕ್ಕೆ ಬಿದ್ದಿತ್ತು. ಇದನ್ನ ಕಂಡ ರೈಸ್ ಮಿಲ್ ಮಾಲೀಕ ತಿಮ್ಮೇಗೌಡ ಆಭರಣಗಳನ್ನ ಪರಿಶೀಲಿಸಿದಾಗ ಜ್ಯುವೆಲರಿ ಅಂಗಡಿಯ ರಶೀದಿ ಪತ್ತೆಯಾಗಿತ್ತು.ಆಭರಣಗಳ ಜೊತೆ ಇದ್ದ ಆಭರಣದಂಗಡಿ ಚೀಟಿ ನೋಡಿದ ತಿಮ್ಮೆಗೌಡರು ನಾಗಮಂಗಲದ ಚಿನ್ನದಂಗಡಿಗೆ ತೆರಳಿ ವಿಚಾರಣೆ ನಡೆಸಿದ ಬಳಿಕ,ಆಭರಣಗಳು ಕಲ್ಲಿನಾಥಪುರ ಗ್ರಾಮದ ಕಲ್ಲೇಗೌಡರಿಗೆ ಸೇರಿದ ಆಭರಣ ಎಂಬುದು ಗೊತ್ತಾಗಿತ್ತು.
ಹದಿನೈದು ದಿನಗಳ ಬಳಿಕ ಗ್ರಾಮಕ್ಕೆ ವಾಪಸ್ಸಾಗಿದ್ದ ವೃದ್ದೆ ಲಕ್ಷ್ಮಮ್ಮಗೆ,ಅವರು ಅವಿತಿಟ್ಟಿದ್ದ ಚಿನ್ನದ ಆಭರಣಗಳ ಮೂಟೆ ಮಾರಾಟವಾದ ವಿಚಾರ ಮಾತ್ರ ಲಕ್ಷ್ಮಮ್ಮನಿಗೆ ಗೊತ್ತೆ ಆಗಿರಲಿಲ್ಲ. ಅತ್ತ ರೈಸ್ ಮಿಲ್ ತಿಮ್ಮೇಗೌಡರು ಮಾತ್ರ ಆಭರಣಗಳನ್ನ ವಾಪಸ್ ತಲುಪಿಸಲೇ ಬೇಕು ಅಂತ ಜ್ಯೂವೆಲರಿ ಅಂಗಡಿ ಮಾಲೀಕನಿಂದ ಮಾಹಿತಿ ಪಡೆದು ಕಲ್ಲಿನಾಥಪುರದ ಕಲ್ಲೆಗೌಡರನ್ನ ಸಂಪರ್ಕ ಮಾಡಿದ್ದರು. ಈ ವೇಳೆ ವಿಚಾರ ಗೊತ್ತಾಗ್ತಿದ್ದಂತೆ ವೃದ್ದೆ ಲಕ್ಷ್ಮಮ್ಮ ರಾಗಿ ಮೂಟೆ ಪರಿಶೀಲಿಸಿದ್ದಾರೆ. ಆದ್ರೆ ಆಭರಣವಿದ್ದ ರಾಗಿ ಮೂಟೆಯನ್ನ ಮಾರಾಟ ಮಾಡಿದ್ದಾಗಿ ಪತಿ ಕಲ್ಲೇಗೌಡ ತಿಳಿಸಿದ್ದು,ರೈಸ್ ಮಿಲ್ ಮಾಲೀಕ ತಿಮ್ಮೇಗೌಡ ಕೂಡ ವೃದ್ದೆ ಕುಟುಂಬವನ್ನ ಸಂಪರ್ಕಿಸಿ ಗುರುತಿನ ಚೀಟಿ ಜೊತೆಗೆ ತಂದು ಆಭರಣಗಳನ್ನ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಅದರಂತೆ ಇಂದು ಬಸರಾಳಿಗೆ ಆಗಮಿಸಿದ ವೃದ್ದೆ ಮತ್ತು ಆಕೆಯ ಪತಿ ಹಾಗೂ ಅವರ ಮಗ ಆಭರಣ ಅವರದ್ದೆ ಎಂದು ಖಚಿತವಾಗ್ತಿದ್ದಂತೆ ಆಭರಣವನ್ನು ಮರುಪಡೆದಿದ್ದಾರೆ.ಕಳೆದುಕೊಂಡ ಆಭರಗಳನ್ನ ವಾಪಸ್ ಪಡೆದ ಲಕ್ಷ್ಮ ಮ್ಮ ,ದುರುಪಯೋಗ ಪಡಿಸಿಕೊಳ್ಳದೆ ವಾರಸುದಾರರಿಗೆ ವಾಪಸ್ಸ ಮರಳಿಸಿದ ರೈಸ್ ಮಿಲ್ ಮಾಲೀಕ ತಿಮ್ಮೇಗೌಡರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.