22 ದಿನಗಳ ಬಳಿಕ ಜೈಲಿನಿಂದ ಮನೆಯತ್ತ ಆರ್ಯನ್ ಖಾನ್ !! | ಜಾಮೀನು ಶ್ಯೂರಿಟಿಗೆ ಸಹಿ ಮಾಡಿದ್ದ ನಟಿ ಜೂಹಿ ಚಾವ್ಲಾ

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಕ್‌ ಖಾನ್‌ ಮಗ,ಅಕ್ಟೋಬರ್ 2 ರಂದು ಐಷಾರಾಮಿ ಹಡಗಿನ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರ್ಯನ್‌ ಖಾನ್‌ 22 ದಿನಗಳ ನಂತರ ಅಂತಿಮವಾಗಿ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾದರು.

ಸೆಷನ್ಸ್‌ ನ್ಯಾಯಾಲಯವು ಬಿಡುಗಡೆ ಮೆಮೊ ನೀಡಿದ ಒಂದು ದಿನದ ನಂತರ, ಅಂದರೆ ಶನಿವಾರ 11 ಗಂಟೆ ಸುಮಾರಿಗೆ ಆರ್ಯನ್‌ ಜೈಲಿನಿಂದ ಹೊರಬಂದರು. ಅಲ್ಲಿಂದ ಕಾರಿನ ಮೂಲಕ ಅವರು ಬಾಂದ್ರಾದಲ್ಲಿರುವ ತಮ್ಮ ಮನೆಗೆ ಸಾಗಿದರು.

ಅವರಿಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿತ್ತು.ನಿನ್ನೆ ಸಂಜೆ ಜಾಮೀನು ಆದೇಶದ ಪ್ರತಿಯನ್ನು ಜಾಮೀನು ಪೆಟ್ಟಿಗೆಯಲ್ಲಿ ಹಾಕಲಾಗಿದೆ. ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಲು ಸಮಯ ಹಿಡಿದಿದ್ದರಿಂದ ಜಾಮೀನು ಪೆಟ್ಟಿಗೆ ತೆರೆಯಲಾಗದ ಕಾರಣ ಬಿಡುಗಡೆ ವಿಳಂಬವಾಯಿತು.ಆದ್ದರಿಂದ,ಆರ್ಯನ್ ಅಕ್ಟೋಬರ್ 29 ರ ರಾತ್ರಿಯನ್ನು ಜೈಲಿನಲ್ಲಿ ಕಳೆಯಬೇಕಾಯಿತು. ಶಾರುಕ್‌ ಕುಟುಂಬದ ಸ್ನೇಹಿತೆ ಮತ್ತು ನಟಿ ಜೂಹಿ ಚಾವ್ಲಾ ಅವರು ಆರ್ಯನ್‌ ಜಾಮೀನಿಗೆ ಭದ್ರತೆ ಒದಗಿಸಿದ್ದಾರೆ.

ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ಗೌರಿ ಖಾನ್ ಇಂದು ಬೆಳಿಗ್ಗೆ ಆರ್ಥರ್ ರೋಡ್ ಜೈಲಿಗೆ ತೆರಳಿ ಮಗ ಬಿಡುಗಡೆಗಾಗಿ ಕಾದಿದ್ದರು ಎನ್ನಲಾಗಿದೆ. ಇದಕ್ಕೂ ಮುನ್ನ ಆರ್ಥರ್ ರೋಡ್ ಜೈಲಿನ ಅಧೀಕ್ಷಕ ನಿತಿನ್ ವಾಯ್ಚಲ್ ಹೇಳಿಕೆಯಲ್ಲಿ, ‘ನಾವು ಆರ್ಯನ್ ಖಾನ್ ಅವರ ಬಿಡುಗಡೆ ಆದೇಶವನ್ನು ಸ್ವೀಕರಿಸಿದ್ದೇವೆ. ಅವರ ಬಿಡುಗಡೆಯ ಪ್ರಕ್ರಿಯೆಯು 1-2 ಗಂಟೆಗಳಲ್ಲಿ ಪೂರ್ಣಗೊಳ್ಳಬೇಕು ಅಂತ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಏತನ್ಮಧ್ಯೆ, ತಂದೆ ಶಾರುಖ್ ಖಾನ್ ತಮ್ಮ ಮಗನನ್ನು ಬರಲು ಆರ್ಥರ್ ರೋಡ್ ಜೈಲಿಗೆ ತಲುಪಲು ತಮ್ಮ ನಿವಾಸ ಮನ್ನತ್‌ನಿಂದ ಹೊರಟಿದ್ದಾರೆ. ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಗುರುವಾರ ಆರ್ಯನ್‌ಗೆ ಜಾಮೀನು ನೀಡುವಾಗ, ಬಾಂಬೆ ಹೈಕೋರ್ಟ್ ಅವರಿಗೆ 14 ಜಾಮೀನು ಷರತ್ತುಗಳನ್ನು ವಿಧಿಸಿ, ಜೈಲಿನಿಂದ ಬಿಡುಗಡೆ ಮಾಡಲು ಆದೇಶ ನೀಡಿದೆ.

ಐದು ಪುಟಗಳ ಆದೇಶದಲ್ಲಿ, ಜಾಮೀನು ಪಡೆದಿರುವ ಆರ್ಯನ್ ಖಾನ್ ಮತ್ತು ಅವರ ಇಬ್ಬರು ಸಹ ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಅವರನ್ನು ತಲಾ ಒಂದು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್‌ನಲ್ಲಿ ಒಂದು ಅಥವಾ ಇಬ್ಬರ ಶ್ಯೂರಿಟಿಯೊಂದಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೈಕೋರ್ಟ್ ಹೇಳಿತ್ತು. ಅದರಂತೆ ಇಂದು ಅವರು ಹೊರಗೆ ಬಂದಿದ್ದಾರೆ.

ಶಾರುಖ್ ಅವರ ನೆಚ್ಚಿನ ಪುತ್ರನಿಗೆ ಇದು ಸುಲಭದ ಕೆಲಸ ಆಗಿರಲಿಲ್ಲ. ಮುಂದಿನ ಹಾದಿಯೂ ಸುಲಭವಲ್ಲ, ಏಕೆಂದರೆ ಆರ್ಯನ್‌ಗೆ ಜಾಮೀನು ಸಿಕ್ಕಿದೆ ಆದರೆ, ಕೇಸ್‌ನಿಂದ ಇನ್ನೂ ಮುಕ್ತಿ ದೊರೆತಿಲ್ಲ.ಆರ್ಯನ್ ಗೆ ಜಾಮೀನು ದೊರೆತಿದೆ, ಆದರೆ ಹಲವಾರು ಷರತ್ತುಗಳ ಆಧಾರದ ಮೇಲೆ ನೀಡಿದೆ.

*ತನಿಖಾಧಿಕಾರಿಯ ಅನುಮತಿ ಇಲ್ಲದೆ ಆರ್ಯನ್ ಖಾನ್ ಮುಂಬೈ ಬಿಡುವಂತಿಲ್ಲ.

  • ಪ್ರತಿ ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರ ನಡುವೆ ಎನ್‌ಸಿಬಿ ಕಚೇರಿಗೆ ಹಾಜರಾಗಬೇಕು.
    *ಬೇರೆ ಯಾವುದೇ ಆರೋಪಿಗಳೊಂದಿಗೆ ಸಂಪರ್ಕದಲ್ಲಿರಬೇಕಾಗಿಲ್ಲ.
    *ತನಿಖೆಗೆ ಸಂಬಂಧಿಸಿದ ವಿಷಯಗಳನ್ನು ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವಂತಿಲ್ಲ.
    *ಆರ್ಯನ್ ತನ್ನ ಪಾಸ್‌ಪೋರ್ಟ್ ಅನ್ನು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಸಲ್ಲಿಸಬೇಕು.
    *ನ್ಯಾಯಾಲಯದ ಅನುಮತಿ ಇಲ್ಲದೆ ದೇಶದಿಂದ ಹೊರಗೆ ಹೋಗುವಂತಿಲ್ಲ.
    *ಯಾವುದೇ ಷರತ್ತನ್ನು ಉಲ್ಲಂಘಿಸಿದರೆ, ವಿಶೇಷ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಲು ಎನ್‌ಸಿಬಿಗೆ ಅಧಿಕಾರ ಇದೆ.

Leave A Reply

Your email address will not be published.