ಸೈಕಲ್ ಏರಿ, ತರಕಾರಿಗಳ ಹಾರ ಕೊರಳಿಗೆ ಧರಿಸಿ ಅಧಿವೇಶನಕ್ಕೆ ತೆರಳಿದ ಸಚಿವ!! | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಫೋಟೋ
ರಾಜಕೀಯದಲ್ಲಿ ಒಂದಿಲ್ಲೊಂದು ಘಟನೆಗಳನ್ನು ಪ್ರತಿಭಟನೆ ನಡೆಸಿ, ಖಂಡಿಸುವುದು ಮಾಮೂಲು. ಚಿತ್ರ-ವಿಚಿತ್ರ ರೀತಿಯಲ್ಲೂ ಈಗೀಗ ಪ್ರತಿಭಟನೆಗಳು ನಡೆಯುತ್ತವೆ. ಆ ಸಾಲಿಗೆ ಸೇರಿದೆ ವಿಚಿತ್ರ ಪ್ರತಿಭಟನೆ.
ಪಾಕಿಸ್ತಾನದ ಸಚಿವರೊಬ್ಬರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಕುತ್ತಿಗೆಗೆ ಆಲೂಗಡ್ಡೆ, ಟೊಮ್ಯಾಟೋ ಮತ್ತು ಇತರ ತರಕಾರಿಗಳಿಂದ ತಯಾರಿಸಿದ ಹಾರವನ್ನು ಧರಿಸಿ ಪಂಜಾಬ್ ವಿಧಾನಸಭೆಗೆ ಸೈಕಲ್‍ನಲ್ಲಿ ತೆರಳುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನ್ ಮುಸ್ಮಿಂ ಲೀಗ್-ಎನ್(ಪಿಎಂಎಲ್-ಎನ್) ಸದಸ್ಯ ತಾರಿಕ್ ಮಸಿಹ್ ಅವರು ದೇಶದಲ್ಲಿ ಹೆಚ್ಚಾಗುತ್ತಿರುವ ಹಣದುಬ್ಬರನ್ನು ವಿರೋಧಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಈ ಕುರಿತಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಏರುತ್ತಿರುವ ಹಣದುಬ್ಬರದ ವಿರುದ್ಧ ಪ್ರತಿಭಟನೆ ಮುಂದುವರಿಸುತ್ತೇನೆ ಎಂದು ತಿಳಿಸಿ, ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸೈಕಲ್‍ನಲ್ಲಿ ಸವಾರಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಕಳೆದ 70 ವರ್ಷಗಳಲ್ಲಿ ಹಣದುಬ್ಬರ ಗರಿಷ್ಟ ಮಟ್ಟ ತಲುಪಿದೆ. ಆಹಾರ ಪದಾರ್ಥಗಳ ಬೆಲೆ ದ್ವಿಗುಣಗೊಳ್ಳುವುದರೊಂದಿಗೆ ತುಪ್ಪ, ಎಣ್ಣೆ, ಸಕ್ಕರೆ, ಹಿಟ್ಟು ಮತ್ತು ಕೋಳಿ ಮಾಂಸದ ಬೆಲೆ ಹೆಚ್ಚಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರಿದಿ ಮಾಡಿದೆ.
ಇತ್ತೀಚೆಗೆ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಪಾಕಿಸ್ತಾನದಲ್ಲಿರುವ ವಿರೋಧ ಪಕ್ಷಗಳು ಮತ್ತು ನಾಗರಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನೇತೃತ್ವದ ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯದ ಬಗ್ಗೆ ಟೀಕಿಸುತ್ತಿದ್ದಾರೆ.