ಕೊಡಗಿನಲ್ಲಿ ಹೆಚ್ಚಿದ ಕೊರೋನ ಪ್ರಕರಣ!!ಒಂದೇ ಶಾಲೆಯ ಸುಮಾರು 33 ವಿದ್ಯಾರ್ಥಿಗಳಿಗೆ ಪಾಸಿಟಿವ್
ಕೊಡಗಿನಲ್ಲಿ ಶೇ. ಒಂದಕ್ಕಿಂತ ಕಡಿಮೆ ಇದ್ದ ಕೊರೋನ ಪಾಸಿಟಿವಿಟಿ ಪ್ರಕರಣ ಪುನಃ ಉಲ್ಬಣಗೊಂಡಿದ್ದು ಒಂದೇ ಶಿಕ್ಷಣ ಸಂಸ್ಥೆಯ ಸುಮಾರು 33 ಜನ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದ್ದು ಆ ಮೂಲಕ ಕೊಡಗಿನಲ್ಲಿ ಕೊರೋನ ಪ್ರಕರಣ ಹೆಚ್ಚಾದಂತಿದೆ.
ಮಡಿಕೇರಿ ತಾಲೂಕಿನ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಸುಮಾರು 33 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಕಂಡುಬಂದಿದ್ದು, ಶಾಲೆ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಇಂತಹ ಬೆಳವಣಿಗೆ ಕಂಡು ಪೋಷಕರ ಸಹಿತ ಜಿಲ್ಲಾಡಳಿತ ಆತಂಕಕ್ಕೊಳಗಾಗಿದೆ.
ಮೊದಲಿಗೆ ಇಬ್ಬರು ವಿದ್ಯಾರ್ಥಿಗಳಲ್ಲಿ ಜ್ವರದ ಲಕ್ಷಣ ಕಂಡುಬಂದಿದ್ದು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಇರುವುದು ಗೊತ್ತಾಗಿದೆ. ಕೂಡಲೇ ಆ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿ ನೆಗೆಟಿವ್ ವರದಿ ಬಂದ ನಂತರ ಪುನಃ ತರಗತಿ ಪ್ರಾರಂಭಿಸಲಾಗಿತ್ತು. ಜಿಲ್ಲಾಡಳಿತದ ಮೂಲಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 33 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ವರದಿ ಬಂದಿದ್ದು ಸದ್ಯ ವಿದ್ಯಾರ್ಥಿಗಳನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.ವಿದ್ಯಾರ್ಥಿಗಳೆಲ್ಲಾ ಒಂದೇ ಜಿಲ್ಲೆಯವರಾಗಿದ್ದು ಜಿಲ್ಲಾಡಳಿತ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ.