ಬಡಗನ್ನೂರು : ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಸಿಗುವ ತನಕ ಹೋರಾಟ: ಲುಕ್ಮಾನ್ ಬಂಟ್ವಾಳ
ಪುತ್ತೂರು: ತಾಲೂಕಿನ ಬಡಗನ್ನೂರು ಎಂಬಲ್ಲಿನ ಅತ್ಯಾಚಾರ ಸಂತ್ರಸ್ತೆ ಅಪ್ರಾಪ್ತ ಬಾಲಕಿಯ ಮನೆಗೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಶನಿವಾರ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು.
ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮುಂದಿನ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಮಾಧ್ಯಮಕ್ಕೆ ತಿಳಿಸಿದರು.
ಬಾಲಕಿಯ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ಅತ್ಯಾಚಾರ ನಡೆಸಿ ಮಗುವಿನ ಜನನಕ್ಕೆ ಕಾರಣವಾಗಿರುವ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಡ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಸಂತ್ರಸ್ತ ದಲಿತ ಕುಟುಂಬಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ನಾವು ಆಗಮಿಸಿದ್ದೇವೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವ ತನಕ ಹೋರಾಟ ನಡೆಸಲಾಗುವುದು. ಅತ್ಯಾಚಾರ ಆರೋಪಿಯನ್ನು ರಕ್ಷಿಸುವವರ ವಿರುದ್ಧವೂ ನಮ್ಮ ಹೋರಾಟ ನಡೆಯಲಿದೆ ಎಂದು ಅವರು ತಿಳಿಸಿದರು.
ಸಂತ್ರಸ್ತ ಬಾಲಕಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪುತ್ತೂರು ಕಾಂಗ್ರೆಸ್ ಎಸ್ಸಿ ಘಟಕವು ಈ ಹಿಂದೆಯೇ ರಾಜಕೀಯ ರಹಿತವಾಗಿ ಧ್ವನಿ ಎತ್ತಿದೆ. ಪ್ರತಿಭಟನಾ ಹೋರಾಟದಲ್ಲಿಯೂ ನಾವು ಮುಂಚೂಣಿಯಲ್ಲಿ ಭಾಗವಹಿಸಿದ್ದೇವೆ. ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಮನವಿ ನೀಡಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರಯತ್ನ ನಡೆಸಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೇಶವ ಪಡೀಲ್ ತಿಳಿಸಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಆನಂದ ಬೆಳ್ಳಾರೆ, ಪುತ್ತೂರು ಬ್ಲಾಕ್ ಎಸ್ಸಿ ಘಟಕದ ಉಪಾಧ್ಯಕ್ಷ ರಾಮ ಪಾಂಬಾರು, ಜಿಲ್ಲಾ ಎಸ್‌ಸಿ ಘಟಕದ ಉಪಾಧ್ಯಕ್ಷ ಪ್ರಹ್ಲಾದ್ ಬೆಳ್ಳಿಪ್ಪಾಡಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ, ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಬಂಗೇರ, ನವಾಝ್ ಉಪ್ಪಿನಂಗಡಿ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ನ ಬಾಲಕೃಷ್ಣ ಕೊಳ್ತಿಗೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.