ಸಿಂಘು ಗಡಿಯಲ್ಲಿ ಪತ್ತೆಯಾದ ಶವ ಗ್ರಾಮಕ್ಕೆ ಬಂದರೂ, ಕುಟುಂಬದವರಿಗೆ ಮುಖ ತೋರಿಸದೆ ಪೊಲೀಸರಿಂದ ಅಂತ್ಯಸಂಸ್ಕಾರ
ಚಂಡೀಗಢ: ಸಿಂಘು ಬಾರ್ಡರ್ ಬಳಿ ಪತ್ತೆಯಾಗಿದ್ದ ಲಖ್ಬೀರ್ ಸಿಂಗ್ ಮೃತದೇಹವನ್ನು ತರನತಾರತ್ ಜಿಲ್ಲೆಯ ಚೀನಾ ಗ್ರಾಮಕ್ಕೆ ಶನಿವಾರ ಸಂಜೆ 6.40ಕ್ಕೆ ತಲುಪಿಸಲಾಗಿತ್ತು. ಆದ್ರೆ ಪೊಲೀಸರು ಕುಟುಂಬಸ್ಥರಿಗೆ ಮುಖ ಸಹ ತೋರಿಸದೇ ನೇರವಾಗಿ ಅಂತ್ಯಸಂಸ್ಕಾರ ಮಾಡಿರುವ ಆರೋಪಗಳು ಕೇಳಿ ಬಂದಿವೆ.
ಶವ ಬರುವ ಮೊದಲೇ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅಂಬುಲೆನ್ಸ್ ಶವವನ್ನು ನೇರವಾಗಿ ಸ್ಮಶಾನಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಶವವನ್ನು ಸಂಪೂರ್ಣ ಪ್ಯಾಕ್ ಮಾಡಲಾಗಿತ್ತು. ಮೃತ ಲಖ್ಬೀರ್ ಸಿಂಗ್ ಪತ್ನಿ ಕೊನೆಯದಾಗಿ ಮುಖ ತೋರಿಸುವಂತೆ ಗೋಗೆರೆದ್ರೂ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ಮಾದರಿಯ ವಸ್ತುವಿನಿಂದ ಪ್ಯಾಕ್ ಮಾಡಲಾಗಿರುತ್ತದೆ. ಅಂತ್ಯಕ್ರಿಯೆ ವೇಳೆ ಈ ಪ್ಲಾಸ್ಟಿಕ್ ತೆಗೆಯಲಾಗುತ್ತದೆ. ಆದ್ರೆ ಪೊಲೀಸರು ಪ್ಲಾಸ್ಟಿಕ್ ಸಹ ತೆಗೆಯಲಿಲ್ಲ. ತುಪ್ಪದ ಬದಲಾಗಿ ಡೀಸೆಲ್ ಬಳಸಿದ್ದರಿಂದ 10 ನಿಮಿಷದಲ್ಲಿ ದೇಹ ಬೆಂಕಿಗಾಹುತಿ ಆಯ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಅಂತ್ಯಸಂಸ್ಕಾರದ ವೇಳೆ ಸ್ಮಶಾನದಲ್ಲಿ ಯಾವುದೇ ವಿದ್ಯುತ್ ದೀಪಗಳು ಸಹ ಇರಲಿಲ್ಲ. ಮೊಬೈಲ್ ಟಾರ್ಚ್ ಬಳಸಿಯೇ ಎಲ್ಲ ಕೆಲಸಗಳನ್ನು ಮುಗಿಸಲಾಗಿದೆ. ಲಖ್ಬೀರ್ ಸಿಂಗ್ ಶವಸಂಸ್ಕಾರದ ವೇಳೆ ಸ್ಥಳದಲ್ಲಿ ಡಿಎಸ್‍ಪಿ ಸುಜ್ಜಾ ಸಿಂಗ್ ಉಪಸ್ಥಿತರಿದ್ದರು. ಅಗ್ನಿಸ್ಪರ್ಶದ ಸಮಯದಲ್ಲಿಯೂ ಯಾವ ಗ್ರಾಮಸ್ಥರಿಗೆ ಅಂತಿಮ ದರ್ಶನಕ್ಕೆ ಅನುಮತಿ ನೀಡಿರಲಿಲ್ಲ.
ಲಖ್ಬೀರ್ ಸಿಂಗ್ ಶವ ಆಗಮಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸಭೆ ನಡೆಸಿದ್ದರು. ಲಖ್ಬೀರ್ ಸಿಂಗ್ ಗುರು ಗ್ರಂಥ ಸಾಹಿಬ್ ಕ್ಕೆ ಅವಮಾನ ಮಾಡಿದ್ದು, ಆತನ ಆಂತ್ಯಸಂಸ್ಕಾರಕ್ಕೆ ಗ್ರಾಮದಲ್ಲಿ ಅವಕಾಶ ನೀಡಲ್ಲ ಎಂದು ಹೇಳಿಕೆ ನೀಡಿದ್ದರು. ಮಧ್ಯಾಹ್ನ ಗ್ರಾಮಕ್ಕೆ ಆಗಮಿಸಿದ್ದ ಸಂಸ್ಕಾರ್ ಸಮಿತಿ ಸದಸ್ಯರು, ಅಂತ್ಯಕ್ರಿಯೆ ಸಿಖ್ ಸಂಪ್ರದಾಯದಂತೆ ನಡೆಸಲು ನಾವು ಅನುಮತಿ ನೀಡಲ್ಲ.ಲಖ್ಬೀರ್ ಸಿಂಗ್ ಶವ ಗ್ರಾಮವನ್ನು ಪ್ರವೇಶಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಗ್ರಾಮಸ್ಥರು ಸಹ ಪಂಚಾಯ್ತಿ ಮತ್ತು ಸಂಸ್ಕಾರ್ ಸಮಿತಿಯ ನಿರ್ಧಾರಕ್ಕೆ ಬದ್ಧವಾಗಿರೋದು ಒಮ್ಮತದ ಹೇಳಿಕೆ ನೀಡಿದ್ದರು. ಇದೇ ವೇಳೆ ಗ್ರಾಮದ ಯಾವ ವ್ಯಕ್ತಿಯೂ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವಂತಿಲ್ಲ ಎಂದು ಡಂಗೂರ ಸಾರಿದ್ದರು. ಕೆಲವೊಂದು ಗುಂಪುಗಳು ಶವವನ್ನು ಗ್ರಾಮ ಪ್ರವೇಶಿಸಲು ತಡೆಯಲು ಸಿದ್ಧತೆ ಸಹ ನಡೆಸಿದ್ದರು. ಈ ಹಿನ್ನೆಲೆ ಪೊಲೀಸರು ಮುಂಜಾಗ್ರತ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದ್ದರು. ಪೊಲೀಸರೇ ಮುಂದೆ ನಿಂತು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಘಟನೆಯ ಬಳಿಕ ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ವೈರಲ್ ಆಗಿದೆ. ಕೈಯಲ್ಲಿ ದೊಣ್ಣೆ ಹಿಡಿದ ವ್ಯಕ್ತಿಯೋರ್ವ ಈ ನಿಹಾಂಗ್ಸ್ ಯುವಕ ಗುರುಗೃಂಥಸಾಹಿಬ್ ಹಾಳು ಮಾಡುತ್ತಿರುವಾಗ ಸಿಕ್ಕಿ ಹಾಕಿಕೊಂಡಿದ್ದಾನೆ. ಯುವಕನ ಈ ಅಸಭ್ಯ ವರ್ತನೆಗೆ ಆತನ ಒಂದು ಕೈ ಮತ್ತು ಕಾಲು ಕತ್ತರಿಸಲಾಗುತ್ತದೆ. ಗುರುಗೃಂಥಸಾಹಿಬ್ ಅಪವಿತ್ರಗೊಳಿಸಿದ ಕಾರಣಕ್ಕೆ ಈ ಶಿಕ್ಷೆ ನೀಡುತ್ತಿದ್ದೇವೆ. ನಾವು ಈ ಯುವಕನನ್ನು ಇಲ್ಲಿಯೇ ಕೊಲ್ಲುತ್ತೇವೆ ಎಂಬ ಮಾತುಗಳನು ವಿಡಿಯೋದಲ್ಲಿ ಕೇಳಬಹುದು. ಇನ್ನು ಕೆಲವರು ಪೊಲೀಸರು ಬಂದು ಮುಂದಿನ ಕ್ರಮ ತೆಗೆದುಕೊಳ್ಳಲಿ ನಮಗೆ ಯಾವುದೇ ಭಯವಿಲ್ಲ. ಇಲ್ಲವಾದ್ರೆ ಗುರುಮಹಾರಾಜರ ಬಗ್ಗೆ ನಮಗೆ ಗೌರವ ಇಲ್ಲ ಎಂಬಂತಾಗಲಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.