ಬೆಳ್ತಂಗಡಿ| ಅಕ್ರಮ ಮರಳುಗಾರಿಕೆ ವ್ಯಾಪಕ | ಅಧಿಕೃತ ಟೆಂಡರ್‌ದಾರರಿಗೆ ಸಮಸ್ಯೆ
ಬೆಳ್ತಂಗಡಿ ತಾಲೂಕಿನಾದ್ಯಂತ ಅಕ್ರಮಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಆತಂಕ ಹಾಗೂ ಅಚ್ಚರಿಗೆ ಕಾರಣವಾಗಿದೆ.ಇದರಿಂದ ಅಧಿಕೃತ ಟೆಂಡರ್‌ದಾರರಿಗೆ ಸಮಸ್ಯೆಯಾಗಿದೆ.
ಲಭ್ಯ ಮಾಹಿತಿಯಂತೆ ಬೆಳ್ತಂಗಡಿ ತಾಲೂಕಿನ ನೇತ್ರಾವತಿ, ಮೃತ್ಯುಂಜಯ ನದಿಗಳ ಪಾತ್ರಗಳಲ್ಲಿ ,ಧರ್ಮಸ್ಥಳ ಗ್ರಾಮದ ಅಜಿಕುರಿ, ಕಲ್ಮಂಜ ಗ್ರಾಮದ ಪಜಿರಡ್ಕ, ಇಂದಬೆಟ್ಟು ಗ್ರಾಮದ ಬೆಳ್ಳೂರು ಬೈಲು, ಮಿತ್ತಬಾಗಿಲು ಗ್ರಾಮದ ಕಿಲ್ಲೂರು, ಮುಂಡಾಜೆ ಗ್ರಾಮದ ಗುಂಡಿ, ಹೊಸಕಾಪು ಹಾಗೂ ಕೊಯ್ಯೂರು ಗ್ರಾಮದ ಡೆಂಬುಗ ಪ್ರದೇಶಗಳ ನದಿ ಪಾತ್ರಗಳಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಹಾಗೂ ದಿನಂಪ್ರತಿ ಹತ್ತಾರು ಲೋಡ್ ಮರಳು ಸಾಗಾಟವಾಗುತ್ತಿದೆ ಎಂಬ ವರದಿಯನ್ನು ಜಿಲ್ಲಾಧಿಕಾರಿಗೆ ಸಂಬಂಧಪಟ್ಟ ಇಲಾಖೆ ನೀಡಿದೆ.
ಧರ್ಮಸ್ಥಳ ಸಮೀಪದ ಅಜಿಕುರಿ ಎಂಬಲ್ಲಿ ನೇತ್ರಾವತಿ ನದಿ ತೀರದಲ್ಲಿ ದೋಣಿಗಳನ್ನು ಬಳಸಿ ಭಾರೀ ಪ್ರಮಾಣದಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಸ್ಥಳೀಯಾಡಳಿತ, ತಹಶೀಲ್ದಾರ್, ಪೊಲೀಸ್, ಗಣಿ ಇಲಾಖೆಗೆ ಮಾಹಿತಿ ನೀಡಿದ್ದರೂ ಪ್ರಭಾವಿಗಳ ಬೆಂಬಲದಿಂದ ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.ಸರಕಾರಕ್ಕೆ ಲಕ್ಷಾಂತರ ರೂ. ತೆರಿಗೆ ವಂಚಿಸಿ ಅಕ್ರಮ ಮರಳುಗಾರಿಕೆ ಮಾಡುತ್ತಿರುವ ಮರಳು ಮಾಫಿಯಾದ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಅಧಿಕೃತ ಟೆಂಡರ್‌ದಾರರಿಗೆ ಕಂಟಕ
ಬೆಳ್ತಂಗಡಿ ತಾಲೂಕಿನ ಪಟ್ರಮೆಯಲ್ಲಿ 5 ವರ್ಷಗಳ ಅವಧಿಗೆ ಮರಳು ತೆಗೆಯಲು ಪರವಾನಿಗೆ ನೀಡಿರುವುದಾಗಿ ಸಂಬಂಧಪಟ್ಟ ಇಲಾಖೆ ತಿಳಿಸಿದೆ. ಆದರೆ ಈ ಭಾಗಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮರಳು ಪೂರೈಕೆ ಮಾಡುತ್ತಿರುವುದರಿಂದ ಸುಮಾರು 15 ಲಕ್ಷ ರೂ. ವ್ಯಯಿಸಿ ಪರವಾನಿಗೆ ಪಡೆದು ನಡೆಸುತ್ತಿರುವ ಟೆಂಡರ್‌ದಾರರಿಗೆ ಕಂಟಕ ಎದುರಾಗಿದೆ.
ಅಕ್ರಮ ದಂಧೆಕೋರರಿಗೆ ದಾಳಿಯ ಪೂರ್ವ ಮಾಹಿತಿ
ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳು ದಾಳಿ ನಡೆಸುವ ಮುನ್ನ ಈ ಮಾಹಿತಿ ಅಕ್ರಮ ಮರಳುಗಾರಿಕೆ ನಡೆಸುವವರಿಗೆ ಒಂದು ದಿನ ಮುಂಚೆಯೇ ತಿಳಿಯುವುದು ಅಚ್ಚರಿಯ ಸಂಗತಿ.ದಾಳಿಯ ಸಮಯದಲ್ಲಿ ಬೋಟ್,ಡ್ರೆಜಿಂಗ್ ಮೆಶಿನ್ ಅನ್ನು ನದಿಯಿಂದ ತೆರವು ಮಾಡಿ ಬೇರೆಡೆಗೆ ಸಾಗಿಸುವುದು,ದಾಳಿಯ ನಂತರ ಪುನಃ ಅದೇ ಸ್ಥಳದಲ್ಲಿಡುವುದು ಒಂದು ಖಯಾಳಿಯಾಗಿದೆ ಎಂಬುದು ಸಾರ್ವಜನಿಕರ ಆರೋಪ.