ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಗೆ ಎಸೈ ಹಲ್ಲೆ ಆರೋಪ | ರಾತ್ರೋರಾತ್ರಿ ಠಾಣೆಗೆ ಮುತ್ತಿಗೆ
ಕುಂದಾಪುರ: ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಗೆ ಕುಂದಾಪುರ ನಗರ ಠಾಣಾಧಿಕಾರಿ ಹೊಡೆದಿದ್ದಾರೆ ಎಂದು ಆರೋಪಿಸಿ ಹಿಂದು ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು ಕುಂದಾಪುರ ನಗರ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಭಜನೆ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಘಟನೆಯ ಹಿನ್ನೆಲೆ
ಭಿನ್ನ ಕೋಮಿನ ಹುಡಗನೊಬ್ಬ ಚೈತ್ರಾ ಕುಂದಾಪುರ ಅವರ ಬಗ್ಗೆ ಅವಹೇಳನಕಾರಿ ವ್ಯಾಟ್ಸಪ್ ಸ್ಟೇಟಸ್ ಹಾಕಿದ್ದು, ಆ ಹುಡುಗ ಹಾಗೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಜಗಳ ನಡೆದಿತ್ತು.
ಘಟನೆಯ ಬಳಿಕ ಹಿರಿಯರ ನೇತೃತ್ವದಲ್ಲಿ ನಗರ ಠಾಣೆಯಲ್ಲಿ ರಾಜಿ ಮಾಡಿಕೊಂಡಿದ್ದ ಎರಡು ಕಡೆಯವರು, ಠಾಣೆಯಲ್ಲಿರುವಾಗಲೇ ನಗರ ಠಾಣಾಧಿಕಾರಿ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಹೊಡೆದಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲೆಯ ಮೂಲೆ ಮೂಲೆಗಳಿಂದ ಹಿಂದು ಜಾಗರಣ ಕಾರ್ಯಕರ್ತರು ಕುಂದಾಪುರ ಠಾಣೆಗೆ ಮುತ್ತಿಗೆ ಹಾಕಿ ಭಜನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಘಟನೆಯ ಬಗ್ಗೆ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು. ನಂತರ ಕಾರ್ಯಕರ್ತರು ಠಾಣೆಯಿಂದ ಹೊರ ನಡೆದರು. ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಮುಖಂಡರು, ಭಾಜಪ ಮುಖಂಡರು ಉಪಸ್ಥಿತರಿದ್ದರು.
ತೀವ್ರ ಹೋರಾಟ ನಡೆಸಲಿದ್ದೇವೆ
ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಸುಖಾ ಸುಮ್ಮನೆ ಟಾರ್ಗೆಟ್ ಮಾಡಿದರೇ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಿದ್ದೇವೆ ಎಂದು ಹಿಂ.ಜಾ.ವೇ ಮಂಗಳೂರು ವಿಭಾಗ ಪ್ರ.ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಹೇಳಿದರು.