ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿಯನ್ನು ಬಂಧಿಸಿ, ಗಲ್ಲಿಗೇರಿಸ್ತಾರಂತೆ !! | ಕಾಂಗ್ರೆಸ್ ನಾಯಕನ ಹೇಳಿಕೆ ಆತಂಕ ಸೃಷ್ಟಿಸಿದೆ
ರಾಜಕೀಯದಲ್ಲಿ ಒಬ್ಬರಿಗೊಬ್ಬರ ಕೆಸರೆರಚಾಟ ಮಾಮೂಲು. ಅದು ಬೇರೆ ಹಂತಕ್ಕೆ ತಲುಪುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವೊಮ್ಮೆ ತಮ್ಮ ಮಾತಿನ ಗಡಿ ಮೀರುವವರೂ ಇದ್ದಾರೆ. ಅಂತಹ ಸಾಲಿಗೆ ಇದೀಗ ಕಾಂಗ್ರೆಸ್ ನಾಯಕರೊಬ್ಬರು ಸಿಲುಕಿದ್ದಾರೆ. ತಮ್ಮ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
ಜಮ್ಮು-ಕಾಶ್ಮೀರದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಅಬ್ದುಲ್ ರಶೀದ್ ಡಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಭವಿಷ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸದ್ಯದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬಂಧಿಸಿ, ಗಲ್ಲಿಗೇರಿಸುತ್ತೇವೆ ಎಂದು ಹೇಳಿದ್ದಾರೆ.
ಶುಕ್ರವಾರ ಕಾಶ್ಮೀರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೀಡುವ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ಅಹಮದ್ ಮೀರ್ ಸಹ ಉಪಸ್ಥಿತರಿದ್ದರು.
ಆರ್ಟಿಕಲ್ 370 ನಮಗೆ ದೊಡ್ಡ ಶಕ್ತಿ ಆಗಿತ್ತು. ಆದ್ರೆ ಬಿಜೆಪಿ ಸರ್ಕಾರ ರದ್ದುಗೊಳಿಸಿತು. ಪ್ರತಿದಿನ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮೊದಲು ಮಾಡುವ ಕೆಲಸವೇ ಮೋದಿ ಅವರ ಬಂಧನ ಎಂದು ಹೇಳಿದ್ದಾರೆ. ಅಬ್ದುಲ್ ರಶೀದ್ ಬಳಿಕ ಮಾತನಾಡಿದ ಗುಲಾಂ ಅಹಮದ್ ಮೀರ್, ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಆಗಸ್ಟ್ 5, 2019 ರಂದು (ಆರ್ಟಿಕಲ್ 370 ರದ್ದುಗೊಳಿಸಿದ ದಿನ) ತೆಗೆದುಕೊಂಡ ನಿರ್ಣಯವನ್ನು ಬದಲಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಜಮ್ಮು-ಕಾಶ್ಮೀರದ ಜನರಿಂದ ಏನನ್ನೂ ಕಿತ್ತುಕೊಂಡಿಲ್ಲ. ಇಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದ್ರೂ ವಿಶೇಷ ಯೋಜನೆ ಮತ್ತು ಅಧಿಕಾರವನ್ನು ನೀಡುತ್ತಾ ಬಂದಿತ್ತು. ಅನುಚ್ಛೇದ 370ರ ಪರವಾದ ಕಾಂಗ್ರೆಸ್ ನಿಲುವನ್ನು ಲಾಭವಾಗಿ ಪಡೆದುಕೊಂಡ ಬಿಜೆಪಿ ರಾಜಕಾರಣಕ್ಕಾಗಿ ರದ್ದುಗೊಳಿಸಿತು. ಆದ್ರೆ ಕಾಂಗ್ರೆಸ್ ಯು ಟರ್ನ್ ತೆಗೆದುಕೊಳ್ಳಲಿಲ್ಲ ಎಂದು ಗುಲಾಂ ಅಹಮದ್ ಮೀರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಬ್ದುಲ್ ರಶೀದ್ ವಿರುದ್ಧ ದೂರು ದಾಖಲಿಸಲು ಮುಂದಾದ ಬಿಜೆಪಿ
ಶುಕ್ರವಾರ ಅಬ್ದುಲ್ ರಶೀದ್ ನೀಡಿದ ಹೇಳಿಕೆ ಸ್ಥಳೀಯವಾಗಿ ವೈರಲ್ ಆಗಿತ್ತು. ಅಬ್ದುಲ್ ರಶೀದ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್, ಕಾಂಗ್ರೆಸ್ ಭಾರತದಲ್ಲಿ ತಿರಸ್ಕೃತಗೊಂಡ ಪಕ್ಷವಾಗಿದೆ. ಸದ್ಯ ಕಾಂಗ್ರೆಸ್ ನಲ್ಲಿ ಅಬ್ದುಲ್ ರಶೀದ್ ನಂತಹವರು ಮಾತ್ರ ಇರಲು ಸಾಧ್ಯ. ದಿನದಲ್ಲಿ ಕನಸು ಕಾಣುವ ಇವರು ಪ್ರಧಾನಿ ಮೋದಿ ಅವರನ್ನು ಗಲ್ಲಿಗೇರಿಸುವ ಮಾತುಗಳನ್ನಾಡುತ್ತಾರೆ ಎಂದು ಮಾತಿನ ಚಾಟಿ ಬೀಸಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿರುವ ಅಬ್ದುಲ್ ರಶೀದ್ ವಿರುದ್ಧ ದೂರು ದಾಖಲಿಸಲು ಬಿಜೆಪಿ ಮುಂದಾಗಿದೆ.
ಕಾಂಗ್ರೆಸ್ ಕನಸು ನನಸಾಗಲ್ಲ
ಅಧಿಕಾರಕ್ಕೆ ಬರುವ ಕಾಂಗ್ರೆಸ್ ಕನಸು ಎಂದಿಗೂ ನನಸಾಗುವ ಕಾಲ ಬರಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಪ್ರಧಾನಿ ಮೋದಿ ವಿರುದ್ಧ ಅಸಂಸದೀಯ ಭಾಷೆ ಬಳಸಿರುವ ಮಾಜಿ ಶಾಸಕ ಅಬ್ದುಲ್ ರಶೀದ್ ವಿರುದ್ಧ ಜಮ್ಮು-ಕಾಶ್ಮೀರದ ಬಿಜೆಪಿ ಘಟಕ ದೂರು ಸಲ್ಲಿಸಲು ನಿರ್ಧರಿಸಿದೆ. ಅಬ್ದುಲ್ ರಶೀದ್ ಅಂತಹ ಅನಕ್ಷರಸ್ಥರು ಮಾತ್ರ ಈ ರೀತಿ ಮಾತನಾಡಲು ಸಾಧ್ಯ ಎಂದು ಠಾಕೂರ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಯೋಚನೆಗಳು ತಾಲಿಬಾನಿಗಳ ಮಾದರಿಯಲ್ಲಿವೆ ಎಂದು ಜಮ್ಮು-ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರ ಆಕ್ಷೇಪಾರ್ಹ ಹೇಳಿಕೆಗಳು
ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕೇಪಾರ್ಹ ಹೇಳಿಕೆಗಳು ನೀಡುತ್ತಾ ಬಂದಿದ್ದಾರೆ. ಫೋನ್ ಹ್ಯಾಕಿಂಗ್ ಸಂಬಂಧಿಸಿದ ವಿಷಯದ ಕುರಿತಾಗಿ ಮಾತನಾಡುವ ವೇಳೆ ಗುಜರಾತಿನ ಕಾಂಗ್ರೆಸ್ ಶಾಸಕರೊಬ್ಬರು ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಹೊಡೆಯುವುದಾಗಿ ಹೇಳಿದ್ದರು. ದುಂಗರಪುರ ಶಾಸಕ ಗಣೇಶ್ ಘೋಗ್ರಾ, ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನ ಕೇಸರಿ ಪಕ್ಷದ ದಲ್ಲಾಳಿ ಎಂದು ಕರೆದಿದ್ದರು. ಇನ್ನೂ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಯುವಕರು ನಿರುದ್ಯೋಗದಿಂದಾಗಿ ಪ್ರಧಾನಿ ಮೋದಿ ಅವರನ್ನು ಹೊಡೆಯುತ್ತಾರೆ ಎಂದು ಹೇಳಿಕೆ ನೀಡಿದ್ದರು.