ಬಿಸಿಲು-ಮಳೆ ಜುಗಲ್ಬಂಧಿ | ಕೋವಿಡ್ ನಡುವೆ ಹೆಚ್ಚುತ್ತಿದೆ ವೈರಲ್ ಜ್ವರ
ಪ್ರಸ್ತುತ ಬಿಸಿಲು ಮತ್ತು ಮಳೆಯ ಜುಗಲ್ಬಂಧಿಯ ವಾತಾವರಣ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಹಿರಿಯರು, ಮಕ್ಕಳೆನ್ನದೆ ವೈರಲ್ ಜ್ವರ ಕಾಣಿಸುತ್ತಿದೆ. ಕೋವಿಡ್ ನಡುವೆ ಇದು ಆತಂಕಕ್ಕೆ ಕಾರಣವಾಗಿದೆ.
ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿದ್ದು, ಮಕ್ಕಳಲ್ಲಿ ಯಾವುದೇ ರೀತಿಯ ಜ್ವರ ಕಂಡು ಬಂದರೂ ಹೆತ್ತವರಲ್ಲಿ ಆತಂಕ ಮನೆ ಮಾಡುತ್ತದೆ. 2 -3 ವಾರಗಳ ಹಿಂದೆ ಜ್ವರ ಬಾಧೆ ಹೆಚ್ಚಾಗಿತ್ತು. ಈಗ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಆದರೆ ಕೆಲವು ದಿನಗಳ ಬಿಸಿಲಿನ ಬಳಿಕ ಮತ್ತೆ ಮಳೆ ಸುರಿಯುತ್ತಿರುವುದರಿಂದ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.
ಕಳೆದ ಮೇ ತಿಂಗಳಿನಿಂದ ಆಗಸ್ಟ್ ಅಂತ್ಯದ ವರೆಗೆ 4 ತಿಂಗಳುಗಳ ಕಾಲ ಮಕ್ಕಳು ಮನೆಯಲ್ಲಿದ್ದರು. ಸೆಪ್ಟಂಬರ್ನಲ್ಲಿ ಕಾಲೇಜು ಮತ್ತು ಶಾಲೆಗಳು ಪುನರಾರಂಭಗೊಂಡಿದ್ದು, 6ನೇ ತರಗತಿಗಿಂತ ಮೇಲಿನ ಮಕ್ಕಳಿಗೆ ಭೌತಿಕ ತರಗತಿ ಒಂದು ವಾರದ ಹಿಂದೆಯಷ್ಟೇ ಆರಂಭವಾಗಿವೆ. ಮಕ್ಕಳು ಮನೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ಜ್ವರ ಪ್ರಕರಣಗಳು ಕಡಿಮೆ ಇದ್ದವು. ಸಮರ್ಪಕವಾಗಿ ಮಾಸ್ಕ್ ಧರಿಸುವುದರಿಂದ ವೈರಲ್ ಜ್ವರದಿಂದ ರಕ್ಷಣೆ ಪಡೆಯಲು ಸಾಧ್ಯ ಎನ್ನುತ್ತಾರೆ ದ.ಕ. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ನವೀನ್ಚಂದ್ರ ಕುಲಾಲ್.
6 ತಿಂಗಳುಗಳಲ್ಲಿ ದ.ಕ. ಜಿಲ್ಲೆಯ ವಿವಿಧ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 3,500 ಮಕ್ಕಳು ವಿವಿಧ ಕಾಯಿಲೆಗಳಿಗಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 785 ಮಂದಿ ಹೊರ ರೋಗಿಗಳಾಗಿ, 183 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಯಾವುದೇ ಮಗು ತೀವ್ರತರವಾದ ಆರೋಗ್ಯ ಸಮಸ್ಯೆಗೆ ಒಳಗಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.