ಅಧಿಕಾರಿಗಳಿಂದ ನಿಯಮ ಬಾಹಿರವಾಗಿ ಕೃಷಿ ಭೂಮಿ ಅರಣ್ಯವಾಗಿ ಪರಿವರ್ತನೆ ಆರೋಪ | ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ
ಕಡಬ : ಪರಿಸರ ಸಂರಕ್ಷಣೆ ಹೆಸರಿನಲ್ಲಿ ಜನ ವಾಸಿಸುತ್ತಿರುವ ಹಾಗೂ ಕೃಷಿ ಚಟುವಟಿಕೆ ನಡೆಸುತ್ತಿರುವ ಕೃಷಿ ಭೂಮಿಯನ್ನು ಅಧಿಕಾರಿಗಳು ಅರಣ್ಯವಾಗಿ ಪರಿವರ್ತಿಸಿ ಭಾರತವನ್ನು ಬಡರಾಷ್ಟ್ರವನ್ನಾಗಿ ಮಾಡಲಾಗುತ್ತಿದೆ ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶೀರಾಡಿ ಆರೋಪಿಸಿದರು.
ಸುಬ್ರಹ್ಮಣ್ಯದ ವಿವಿಐಪಿ ಕೊಠಡಿಯಲ್ಲಿ ಶುಕ್ರವಾರ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಪರಿಸರ ರಕ್ಷಣೆ ಹೆಸರಲ್ಲಿ ಜನರ ಬದುಕನ್ನು ಕಸಿದುಕೊಳ್ಳಲು ಯತ್ನಿಸಲಾಗುತ್ತಿದೆ. ಪ್ರಾಣಿಗಳ ರಕ್ಷಣೆ ಎಂದು ಹೇಳಿ ಕೋವಿ ಪರವನಿಗೆ ರದ್ದು ಮಾಡಲಾಗಿದೆ, ಈಗ ಅದರಲ್ಲೂ ಲಂಚ ಕೇಳಲಾಗುತ್ತಿದೆ. ಪರೋಕ್ಷವಾಗಿ ಕಾಡುಪ್ರಾಣಿಗಳಿಂದ ಕೃಷಿ ನಾಶ ಮಾಡಿಸಿ ಆಹಾರ ಉತ್ಪಾದನೆ ಇಲ್ಲದಂತೆ ಮಾಡಲಾಗುತ್ತಿದೆ ಎಂದು ಅವರು ದೂರಿದರು.
5 ಎಕ್ರೆಯಿಂದ ಕಡಿಮೆ ಇರುವ ಅರಣ್ಯವನ್ನು, ಸರಕಾರಿ ಭೂಮಿಯನ್ನು, ಗೋಮಾಳ, ನಾಗಬನ, ನಡುತೋಪು, ಸಾರ್ವಜನಿಕರಿಗೆ ಕಾದಿರಿಸಿದ ಜಾಗ, ಡಿಸಿ ಜಾಗ ಇವುಗಳನ್ನು ಸುರಕ್ಷಿತ ಅರಣ್ಯಕ್ಕೆ ಸೇರಿಸುವ ಹಾಗೆ ಇಲ್ಲ ಆದರೆ ಇಲ್ಲಿ ಸೇರಿಸಲಾಗಿದೆ ಎಂದು ದೂರಿದ ಅವರು ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳು, ಜನರು ಪ್ರಶ್ನೆ ಮಾಡಿಲ್ಲ ಎಂದರು.
ಸಣ್ಣ ಸಂಸ್ಥೆಗಳು ಮರಳು ಗಣಿಗಾರಿಕೆ ನಡೆಸಿದ್ದಲ್ಲಿ ಕ್ರಮಕೈಗೊಳ್ಳುವ ಅಧಿಕಾರಿಗಳು, ದೊಡ್ಡ ಕಂಪೆನಿಗಳು ನಡೆಸುವ ಮರಳು ಗಣಿಗಾರಿಕೆ ಬಗ್ಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದ ಅವರು ಇಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದರು.
ಐಎಎಸ್, ಐಪಿಎಸ್ ಮಟ್ಟದ ಅಧಿಕಾರಿಗಳಿಂದ ದೇಶವನ್ನು ಕೊಲ್ಲೆ ಹೊಡೆಸುವ ಪ್ರಯತ್ನ ವಿದೇಶಿ ಕೈವಾಡದಿಂದ ನಿರಂತರವಾಗಿ ನಡೆಯುತ್ತಿದೆ.
ಅಧಿಕಾರಿಗಳು ಹಣ ಮಾಡುವ ತಂತ್ರಗಾರಿಕೆ ಇದಾಗಿದ್ದು, ಈ ರೀತಿ ಕೃಷಿಭೂಮಿಯನ್ನು ಅರಣ್ಯಕ್ಕೆ ಸೇರಿಸುವುದರಿಂದ ಕ್ರಮೇಣ ಅಭಿವೃದ್ಧಿ ಕುಂಠಿತವಾಗಿ, ದೇಶ ಅಸ್ತಿತ್ವ ಕಳೆದುಕೊಳ್ಳಲಿದೆ. ಇಂತಹ ಪ್ರಯತ್ನಗಳಿಂದ ಜನರು ತಮ್ಮ ಸರಕಾರದ ವಿವಿಧ ಯೋಜನೆಯ ಮೂಲಕ ಜಾಗದ ರೆಕಾರ್ಡ್ ಮಾಡಲು ಸಾಧ್ಯವಾಗುತ್ತಿಲ್ಲ. ಅಕ್ರಮ-ಸಕ್ರಮ, 94ಸಿ ಅರ್ಜಿಗಳ ನೆಪದಲ್ಲಿ ಅಧಿಕಾರಿ ಸುಲಭ ರೀತಿಯಲ್ಲಿ ಹಣ ಮಾಡುವ ದಾರಿ ಕಂಡುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆ ಎಚ್ಚರಿಕೆ;
ಅಧಿಕಾರಿಗಳು ನಿಯಮ ಬಾಹಿರವಾಗಿ ಮಾಡುವ ಕೆಲಸ, ಯೋಜನೆಗಳ ಹೆಸರಿನಲ್ಲಿ ಬಡ ಜನರು, ರೈತರಿಂದ ಹಣ ಪಡೆಯುವ ಭ್ರಷ್ಟಾಚಾರ ವ್ಯವಸ್ಥೆ ಹಾಗೂ ಅರಣ್ಯ ಇಲಾಖೆ ಕೃಷಿ ಭೂಮಿಯನ್ನು ಅರಣ್ಯವನ್ನಾಗಿ ಪರಿವರ್ತಿಸಿದ ಕ್ರಮದ ಬಗ್ಗೆ ಸರಕಕಾರ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ರವೀಂದ್ರ ಕುಮಾರ್ ರುದ್ರಪಾದ, ಚಂದ್ರಶೇಖರ ಕೊನಡ್ಕ, ಶೇಖರಪ್ಪ ತಳವಾರ ಶಶಿಧರ ಎ ನಾರ್ಣಕಜೆ., ಸುರೇಶ್ ಉಜಿರಡ್ಕ ಉಪಸ್ಥಿತರಿದ್ದರು.