ಕುಡಿದ ಅಮಲಿನಲ್ಲಿ ನಾಪತ್ತೆಯಾಗಿದ್ದು ತಾನೇ ಎಂದು ತಿಳಿಯದೆ ತನ್ನನ್ನೇ ಹುಡುಕಾಡಿದ ಕುಡುಕ!!
ಕುಡಿದ ಅಮಲಿನಲ್ಲಿ ಬಹುತೇಕರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ.ಎಲ್ಲಿ ಯಾವಾರೀತಿ ಇದ್ದೀವಿ ಎಂಬ ಪರಿಜ್ಞಾನವೇ ಇರುವುದಿಲ್ಲ. ಆದರೆ ಇಲ್ಲೊಬ್ಬ ಕುಡುಕ ತನ್ನನ್ನೇ ಜೊತೆಗಿದ್ದವರು ಹುಡುಕಿದರೂ ಈತನಿಗೆ ಅದು ತಾನೇ ಎಂಬುದು ಗೊತ್ತೇ ಇಲ್ಲವಂತೆ.
ಹೌದು.ಇಲ್ಲೊಬ್ಬ ಕುಡುಕ ತನ್ನ ಜೊತೆಗಿದ್ದವರೆಲ್ಲರೂ ತನ್ನನ್ನೇ ಹುಡುಕುತ್ತಿದ್ದಾರೆ ಎಂಬುದೇ ಗೊತ್ತಿಲ್ಲದೆ ಅವರೊಂದಿಗೆ ಸೇರಿ ತಾನೂ ಹುಡುಕಾಟ ನಡೆಸಿದ್ದಾರೆ. ಈ ರೀತಿಯ ಘಟನೆ ಟರ್ಕಿಯಲ್ಲಿ ನಡೆದಿದೆ. ಟರ್ಕಿಷ್ ವ್ಯಕ್ತಿಯೊಬ್ಬ ತನ್ನ ಗೆಳೆಯರ ಜೊತೆ ಕಾಡಿನಲ್ಲಿ ಪಾರ್ಟಿ ಮಾಡಲು ಹೋಗಿದ್ದರು. ಆದರೆ, ಬೆಳಗಿನ ಜಾವವಾದರೂ ಆತ ಬರದೇ ಇದ್ದಾಗ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಆ ಕಾಡಿನ ಬಳಿಯಿದ್ದ ಸ್ಥಳೀಯರಿಗೆ ಕಾಣೆಯಾಗಿದ್ದವನ ಮಾಹಿತಿ ನೀಡಿ ಹುಡುಕಲು ಹೇಳಿದ್ದರು. ಅದರಂತೆ ಹುಡುಕಲು ಹೋದಾಗ ಅಲ್ಲಿ ಕುಡಿಯುತ್ತಾ ಕುಳಿತಿದ್ದವರು ಕೂಡ ಸ್ಥಳೀಯರೊಂದಿಗೆ ಸೇರಿ ಹುಡುಕಲು ತೊಡಗಿದ್ದರು. ಆ ಗುಂಪಿನಲ್ಲೇ ಸೇರಿಕೊಂಡ ಆ ವ್ಯಕ್ತಿ ಅವರೆಲ್ಲರೂ ತನ್ನನ್ನೇ ಹುಡುಕುತ್ತಿದ್ದಾರೆಂದು ಗೊತ್ತಾಗದೆ ತಾನೂ ಅವರೊಂದಿಗೆ ಹುಡುಕಾಟ ಶುರು ಮಾಡಿದ್ದರು.
50 ವರ್ಷದ ಟರ್ಕಿಷ್ ವ್ಯಕ್ತಿ ಗೆಳೆಯರ ಜೊತೆ ಹೊರಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ರಾತ್ರಿಯಿಂದ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆ ದಟ್ಟ ಕಾಡಿನಲ್ಲೇ ಆತ ಸಿಲುಕಿರಬಹುದು ಎಂದು ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಆ ಕಾಡಿನ ಬಳಿಯಿದ್ದ ಸ್ವಯಂಸೇವಕರು ಹಾಗೂ ಸ್ಥಳೀಯರು ಆತನಿಗಾಗಿ ಹುಡುಕಾಟ ನಡೆಸಿದ್ದರು. ವಿಷಯವೇನೆಂದು ತಿಳಿಯದೆ ಆ ಟರ್ಕಿಷ್ ವ್ಯಕ್ತಿ ಕೂಡ ಅವರೊಂದಿಗೆ ಕಾಡಿನಲ್ಲಿ ಅಲೆದು ಹುಡುಕಾಟ ನಡೆಸಿದ್ದಾರೆ. ಆ ಗುಂಪಿನವರಿಗೂ ತಾವು ಹುಡುಕುತ್ತಿರುವ ವ್ಯಕ್ತಿ ತಮ್ಮ ಜೊತೆಗೇ ಇದ್ದಾನೆಂದು ಗೊತ್ತಾಗಿಲ್ಲ.
ಕೊನೆಗೆ ಆ ಗುಂಪಿನವರು ಕಾಡಿನಲ್ಲಿ ಬೇಹನ್ ಮುಟ್ಲು ಎಂದು ಆತನ ಹೆಸರನ್ನು ಜೋರಾಗಿ ಕೂಗಿದಾಗ ನಾನಿಲ್ಲೇ ಇದ್ದೇನೆ ಎಂದು ಈತ ಹೇಳಿದ್ದಾರೆ. ಅದನ್ನು ಕೇಳಿ ಆ ಗುಂಪಿನವರು ಕೋಪಗೊಂಡು ಇಷ್ಟು ಹೊತ್ತು ಯಾಕೆ ನೀನೇ ಅವನು ಎಂದು ಹೇಳಲಿಲ್ಲ ಎಂದು ಗಲಾಟೆ ಮಾಡಿದ್ದಾರೆ. ನೀವು ಯಾರನ್ನು ಹುಡುಕುತ್ತಿದ್ದೀರೆಂದು ನನಗೆ ಗೊತ್ತಿರಲಿಲ್ಲ ಎಂದು ಆತ ಹೇಳಿದ್ದಾರೆ. ಬಳಿಕ ಆತನನ್ನು ಅಲ್ಲಿಂದ ಕರೆದುಕೊಂಡು ಹೋಗಿ ಮನೆಯವರಿಗೆ ಒಪ್ಪಿಸಲಾಗಿದೆ.