ಕಾಂಗ್ರೆಸ್ ಆಡಳಿತದಲ್ಲಿ ತಾಲಿಬಾನಿ ಸಂಸ್ಕೃತಿ ಇತ್ತು -ನಳಿನ್

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಲ್ಲಿ ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಕೊಲೆ, ಸುಲಿಗೆ, ಗೋ ಹತ್ಯೆಗಳು ಅವ್ಯಾಹತವಾಗಿ ನಡೆದಿದ್ದು, ತಾಲಿಬಾನ್ ಸಂಸ್ಕೃತಿ ಅವರದ್ದೇ ಆಗಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದರು.

 

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ತಾಲಿಬಾನ್ ಇದ್ದಂತೆ’ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಅತಿ ಹೆಚ್ಚು ಹತ್ಯೆಗಳು ನಡೆದಿದ್ದವು. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ದೀಪಕ್ ರಾವ್, ಶರತ್ ಮಡಿವಾಳ, ಪ್ರಶಾಂತ ಪೂಜಾರಿ ಮುಂತಾಗಿ ಹಲವು ಹಿಂದು ಕಾರ್ಯಕರ್ತರ ಹತ್ಯೆಗಳು ನಡೆದಿದ್ದವು.

ರಾಜ್ಯದಲ್ಲಿ ಒಟ್ಟು 24 ಮಂದಿ ಹಿಂದು ಸಂಘಟನೆಯ ಕಾರ್ಯಕರ್ತರನ್ನು ಕೊಲ್ಲಲಾಗಿತ್ತು. ಸಿದ್ದರಾಮಯ್ಯ ಆಡಳಿತದಲ್ಲಿಗ ಅತಿ ಹೆಚ್ಚು ಹತ್ಯೆಗಳು ನಡೆದಿತ್ತು ಎನ್ನುವುದೇ ತಾಲಿಬಾನ್ ಸಂಸ್ಕೃತಿ. ಅದು ಅವರಲ್ಲಿನ ತಾಲಿಬಾನ್ ಮನೋಭಾವವನ್ನು ಸೂಚಿಸುತ್ತದೆ. ಕೊಲೆ, ಸುಲಿಗೆ, ಗೋಹತ್ಯೆ ಅವರ ಕಾಲದಲ್ಲೇ ಹೆಚ್ಚು ನಡೆದಿದೆ.

ಇದರಿಂದಾಗಿ ಸಿದ್ದರಾಮಯ್ಯ ಅವರು ಭಯೋತ್ಪಾದಕ ಇದ್ದಂತೆ. ಹಾಗಿರುವಾಗ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ನಡೆಯಲಿರುವ ಮುಂದಿನ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ.

ಈಗಾಗಲೇ ಎರಡೂ ಕ್ಷೇತ್ರದಲ್ಲಿ ಪಕ್ಷದ ಕಡೆಯಿಂದ ಜವಾಬ್ದಾರಿ
ನೀಡಿ ಮತಗಟ್ಟೆ ಕಾರ್ಯ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ. ಎಲ್ಲ ಕಡೆ ನಾಲ್ಕೈದು ಮಂದಿ ಟಿಕೆಟ್‌ಗೆ ಅಪೇಕ್ಷಿತರು ಇರುವುದು ರಾಜಕಾರಣದಲ್ಲಿ ಸಹಜ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವ ವಿಶ್ವಾಸ ಜನರಿಗೆ ಇಲ್ಲದಾಗಿದೆ.

ಕಾಂಗ್ರೆಸ್ ಈಗ ಮುಳುಗಿದ ಹಡಗು. ಹೀಗಾಗಿ ಕಾಂಗ್ರೆಸ್‌ನ ಹತ್ತಾರು ಶಾಸಕರ
ಸಹಿತ ಕೆಲವು ಪ್ರಮುಖರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ನಮ್ಮ ಪಕ್ಷಕ್ಕೆ ಸೇರಲು ಬರುವ ಹಲವರು ನನ್ನ ಸಂಪರ್ಕದಲ್ಲೂ ಇದ್ದಾರೆ ಎಂದು ನಳಿನ್ ಹೇಳಿದರು

Leave A Reply

Your email address will not be published.