ಹಾಲು ಹಲ್ಲು ಬಿದ್ದುಹೋಗಿ ಹೊಸ ಹಲ್ಲು ಹುಟ್ಟಿಲ್ಲವೆಂದು ಪ್ರಧಾನಿಗೇ ಪತ್ರ ಬರೆದ ಪೋರರು | ಮಕ್ಕಳ ಮುಗ್ಧತೆಗೆ ಮನಸೋತು, ಪ್ರೀತಿಯ ಹಾರೈಕೆಗಳ ಸುರಿಮಳೆಗೈಯುತ್ತಿದ್ದಾರೆ ನೆಟ್ಟಿಗರು !!
ನವದೆಹಲಿ: ಇಬ್ಬರು ಮಕ್ಕಳ ಹಾಲು ಹಲ್ಲು ಬಿದ್ದು ಹೊಸ ಹಲ್ಲು ಇನ್ನೂ ಹುಟ್ಟಿಲ್ಲ. ಇದರಿಂದ ಬೇಸರಗೊಂಡ ಮಕ್ಕಳು ನೇರವಾಗಿ ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವುದು ಎಲ್ಲಡೆ ಸುದ್ದಿಯಾಗುತ್ತಿದೆ.
ಪ್ರೀತಿಯ ಹಿಮಾಂತ ಮಾಮ ನನ್ನ ಹಲ್ಲುಗಳು ಬಿದ್ದು ಹೋಗಿವೆ. ಇನ್ನು ಇದುವರೆಗೂ ಬಂದಿಲ್ಲ. ಆದ ಕಾರಣ ನಾನು ನನ್ನ ಇಷ್ಟದ ಆಹಾರವನ್ನು ಸೇವಿಸಲು ಆಗುತ್ತಿಲ್ಲ. ದಯವಿಟ್ಟು ಏನಾದರೂ ಕ್ರಮ ಕೈಗೊಳ್ಳಿ.ಪ್ರೀತಿಯ ಮೋದಿಜೀ, ನನ್ನ ಮೂರು ಹಲ್ಲುಗಳು ಉದುರಿ ಹೋಗಿವೆ. ದಯವಿಟ್ಟು ನನ್ನ ಹಲ್ಲು ಇದುವರೆಗೂ ಬಾರದೇ ಇರುವುದಕ್ಕೆ ಏನಾದರೂ ಒಂದು ಕ್ರಮ ತೆಗೆದುಕೊಳ್ಳಿ. ನನ್ನ ಇಷ್ಟದ ಆಹಾರವನ್ನು ಜಗಿಯಲು, ತಿನ್ನಲು ಬಹಳ ಕಷ್ಟಪಡುತ್ತಿದ್ದೇನೆ. ಹೌದು, ಈ ರೀತಿಯ ಪತ್ರ ಬರೆದವರು ಇಬ್ಬರು ಮಕ್ಕಳು.
ಸ್ವಂತ ಅಕ್ಕ-ತಮ್ಮನಾದ ಆರು ವರ್ಷದ ರಾವ್ಜ ಮತ್ತು ಐದು ವರ್ಷದ ಆರ್ಯನ್ ಮೂಲತಃ ಅಸ್ಸಾಮಿನವರು. ಇವರಿಬ್ಬರು ಸೇರಿಕೊಂಡು ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುದ್ದಾದ ಬರವಣಿಗೆ ಮತ್ತು ವಿಚಾರಕ್ಕೆ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ ಈ ಪುಟಾಣಿಗಳು.
ಅವರ ಹಾಲು ಹಲ್ಲುಗಳು ಬಿದ್ದು ಹೋಗಿ ಹದಿಹರೆಯದ ಹಲ್ಲು ಬರಲು ತಡವಾಗಿರುವುದಕ್ಕೆ ಬೇಸರಿಸಿಕೊಂಡ ಇವರು ಪೆನ್ಸಿಲ್ ಮತ್ತು ಪೇಪರ್ ತೆಗೆದುಕೊಂಡು ಅವರ ಸಮಸೈಯನ್ನು ನೇರವಾಗಿ ರಾಷ್ಟ್ರದ ಹಿರಿಯ ಮುಖಂಡರ ಎದುರೇ ತೆರೆದಿಟ್ಟಿದ್ದಾರೆ.
ಒಡಹುಟ್ಟಿದವರ ಪತ್ರಗಳನ್ನು ಅವರ ತಾಯಿಯ ಚಿಕ್ಕಪ್ಪ ಮುಖ್ತರ್ ಅಹಮದ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಮತ್ತು ಈಗ ಅವು ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದಿವೆ. ಅವರ ಚಿಕ್ಕಪ್ಪ ಪತ್ರಗಳ ಫೋಟೋ ತೆಗೆದು, “ಹಿಮಂತ ಬಿಸ್ವ ಶರ್ಮ, ನರೇಂದ್ರ ಮೋದಿಯವರಿಗೆ ನನ್ನ ಸೊಸೆ ರಾವ್ಜಾ (6 ವರ್ಷ) ಮತ್ತು ಸೋದರಳಿಯ ಆರ್ಯನ್ (5 ವರ್ಷ) ನನ್ನನ್ನು ನಂಬಿರಿ, ನಾನು ಮನೆಯಲಿಲ್ಲ, ನಾನು ಕರ್ತವ್ಯದಲ್ಲಿದ್ದೇನೆ. ನನ್ನ ಸೊಸೆ ಮತ್ತು ಸೋದರಳಿಯರು ತಮ್ಮದೇ ಆದ ರೀತಿಯಲ್ಲಿ ಬರೆದಿದ್ದಾರೆ. ದಯವಿಟ್ಟು ಅವರ ಹಲ್ಲುಗಳಿಗೆ ಏನಾದರೂ ಸಲಹೆ ಸೂಚನೆ ನೀಡಿ, ಏಕೆಂದರೆ ಅವರು ತಮ್ಮ ನೆಚ್ಚಿನ ಆಹಾರವನ್ನು ಜಗಿಯಲು ಸಾಧ್ಯವಾಗುತ್ತಿಲ್ಲ ಎಂದು ಬರೆದು ಶೇರ್ ಮಾಡಿಕೊಂಡಿದ್ದಾರೆ.
ಈ ಇಬ್ಬರು ಮಕ್ಕಳ ಮುಗ್ಧತೆಗೆ ಸಾವಿರಾರು ನೆಟ್ಟಿಗರು ಮನಸೋತಿದ್ದು, ಪ್ರೀತಿಯ ಸುರಿಮಳೆಗೈಯ್ಯುತ್ತಿದ್ದಾರೆ. ಪ್ರತಿ ಕಮೆಂಟ್‍ದಾರರು, ಮುಗ್ಧ ಪುಟಾಣಿಗಳು, ಮುಗ್ಧ ಮತ್ತು ಮುದ್ದಾದ ಮಕ್ಕಳು, ಹೌ ಸ್ವೀಟ್, ಜಾಣರು ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಈ ಪತ್ರವನ್ನು ಸೆಪ್ಟೆಂಬರ್ 25ರ ಸಂಜೆಯ ವೇಳೆ ಶೇರ್ ಮಾಡಿದ್ದಾರೆ.
ಒಟ್ಟಿನಲ್ಲಿ ಇವರ ಹತಾಶೆ, ಬೇಡಿಕೆಗಳು ಮಾತ್ರ ಜನರನ್ನು ಸೆಳೆದಿದ್ದು, ಮುಖ್ಯಮಂತ್ರಿ ಹಾಗೂ ನರೇಂದ್ರ ಮೋದಿ ಈ ಮುದ್ದಾದ ಪುಟಾಣಿಗಳ ಬರಹದ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ನೋಡಬೇಕಾಗಿದೆ.