15 ವರ್ಷದ ಬಾಲಕಿ ಮೇಲೆ ಎಂಟು ತಿಂಗಳಿನಿಂದ ಸಾಮೂಹಿಕ ಅತ್ಯಾಚಾರ ಪ್ರಕರಣ | ಇಬ್ಬರು ಅಪ್ರಾಪ್ತರು ಸೇರಿ 26 ಮಂದಿ ಬಂಧನ !!
ಮುಂಬೈನ ಡೊಂಬಿವಲಿ 15 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಥಾಣೆ ಪೊಲೀಸರು ಇಲ್ಲಿಯವರೆಗೂ 26 ಆರೋಪಿಗಳನ್ನು ಬಂಧಿಸಿ, ಮೂವರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ.
15 ವರ್ಷದ ಬಾಲಕಿ ಮೇಲೆ ಕಳೆದ 8 ತಿಂಗಳಿನಿಂದ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಕಾಮುಕರು ಹಲವು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಬಾಲಕಿ ನೀಡಿದ ದೂರಿನನ್ವಯ ಪೊಲೀಸರು ಕಲ್ಯಾಣದ ಡೊಂಬಿವಲಿಯಲ್ಲಿರುವ ಮನ್ಪದ ಪೊಲೀಸರು ಬುಧವಾರ ರಾತ್ರಿ 33 ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ), 376(ಎನ್)(ಪುನರಾವರ್ತಿತ ಅತ್ಯಾಚಾರ), 376(ಡಿ)(ಸಾಮೂಹಿಕ ಅತ್ಯಾಚಾರ) 376(3)(ಹದಿನಾರು ವರ್ಷದೊಳಗಿನ ಮಹಿಳೆಯ ಮೇಲೆ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ(ಪೊಕ್ಸೊ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತಂತೆ ಹೆಚ್ಚುವರಿ ಪೊಲೀಸ್ ಆಯುಕ್ತರಾದ ದತ್ತಾತ್ರಯ್ ಕರಾಳೆ ಅವರು, ಈ ವರ್ಷದ ಜನವರಿ 29 ರಿಂದ ಸೆಪ್ಟೆಂಬರ್ 22ರ ನಡುವೆ ಈ ಘಟನೆ ನಡೆದಿದೆ. ಬಾಲಕಿಯ ಪ್ರಿಯಕರ ಆಕೆಯ ಮೇಲೆ ಅತ್ಯಾಚಾರ ಎಸಗಿದ ವೀಡಿಯೋವನ್ನು ರೆಕಾರ್ಡ್ ಮಾಡಿ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ. ನಂತರ ಆತನ ಸ್ನೇಹಿತರು ಮತ್ತು ಪರಿಚಯಸ್ಥರು ಜಿಲ್ಲೆಯ ಡೊಂಬಿವಿಲಿ, ಬದ್ಲಾಪುರ, ಮುರ್ಬಾದ್ ಮತ್ತು ರಬಾನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕನಿಷ್ಟ ನಾಲ್ಕರಿಂದ ಐದು ಬಾರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಸಿಪಿ ಸೋನಾಲಿ ಧೋಲೆ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು(ಎಸ್ಐಟಿ) ರಚಿಸಲಾಗಿದೆ ಎಂದರು.
ಬಾಲಕಿ 33 ವ್ಯಕ್ತಿಗಳ ಹೆಸರನ್ನು ತಿಳಿಸಿದ್ದಾಳೆ. ಈ ಪೈಕಿ 26 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಇಬ್ಬರು ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದೆ. ಬಾಲಕಿಯ ಸ್ಥಿತಿ ಸ್ಥಿರವಾಗಿದೆ. ಸದ್ಯ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.