ಕಾಯಕವೇ ಕೈಲಾಸ ಈ ಕಾಯಕ ಯೋಗಿಗೆ | ಕಿಂಚಿತ್ತೂ ಟೈಮ್ ವೇಸ್ಟ್ ಮಾಡದೆ ವಿಮಾನದಲ್ಲಿಯೂ ಕಾರ್ಯನಿರ್ವಹಿಸಿ ಅಮೆರಿಕ ತಲುಪಿದ ಪ್ರಧಾನಿ ಮೋದಿ  

ಕೊರೋನಾದಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಕ್ಕೆ ಕಡಿವಾಣ ಬಿದ್ದಿತ್ತು. ಇದೀಗ ಪುನಃ ಅಮೆರಿಕ ಪ್ರವಾಸ ಬೆಳೆಸಿರುವ ಅವರು, ಹಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಪ್ರಧಾನಿ ಮೋದಿಯವರ ಕಾರ್ಯವೈಖರಿಯ ಬಗ್ಗೆ ಇದಾಗಲೇ ಸಾಕಷ್ಟು ದೇಶಗಳಲ್ಲಿಯೂ ಚರ್ಚೆ ನಡೆದಿದೆ.

 

ದಕ್ಷ ಆಡಳಿತಗಾರ, ಸಮರ್ಥ ನಾಯಕ, ಸ್ಪಂದನಶೀಲ ಪ್ರಧಾನಿಯಾಗಿ ಗಮನ ಸೆಳೆದಿರುವ ನರೇಂದ್ರ ದಾಮೋದರ ದಾಸ್ ಮೋದಿ ಅವರದ್ದು ವಿಶಿಷ್ಟ ವ್ಯಕ್ತಿತ್ವ. ರಾಜಕೀಯದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದವರು. ಅವರು ಸವಾಲುಗಳನ್ನು ಪರಿಹರಿಸುವ ಬಗೆಯೂ ಅನನ್ಯವಾದುದು. ದಣಿವರಿಯದೆ ದಿನಕ್ಕೆ 18 ಗಂಟೆ ಕೆಲಸ ಮಾಡುವ ಮೋದಿ ಸದಾ ಕ್ರಿಯಾಶೀಲ.

ದಿನಕ್ಕೆ ಮೂರ್ನಾಲ್ಕು ಗಂಟೆ ಮಾತ್ರ ನಿದ್ದೆ. ನಿಯಮಿತ ವ್ಯಾಯಾಮ, ಯೋಗ ನಂತರ ಉಳಿದ ಸಮಯವಷ್ಟೂ ಬಿಜಿಯಾಗಿರುವ ಪ್ರಧಾನಿಯವರು ಸ್ವಲ್ಪವೂ ಸಮಯವನ್ನು ವ್ಯರ್ಥ ಮಾಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದದ್ದೇ. ಇದೀಗ ವಿಮಾನದಲ್ಲಿಯೂ ಪ್ರಧಾನಿ ಕಾರ್ಯನಿರತರಾಗಿರುವ ದೃಶ್ಯ ಕಂಡುಬಂದಿದೆ.

ಈ ಪ್ರಯಾಣದ ವೇಳೆ ಪ್ರಧಾನಿಯವರು ವಿಮಾನದಲ್ಲಿಯೂ ಟೈಂ ವೇಸ್ಟ್ ಮಾಡದೇ ಕೆಲಸದಲ್ಲಿ ನಿರತರಾಗಿದ್ದ ಫೋಟೋ ಅವರ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳ ಪ್ರವಾಸಕ್ಕಾಗಿಯೇ ಬೋಯಿಂಗ್ 777-3000 ಈಆರ್ ವಿಮಾನ ಏರ್ ಇಂಡಿಯಾ ಒನ್ ವಿಮಾನ ಖರೀದಿಸಲಾಗಿದ್ದು, ಅದರಲ್ಲಿ ದೆಹಲಿಯಿಂದ ಮೋದಿ ಪ್ರಯಾಣ ಬೆಳೆಸಿದ್ದರು.

ನಿನ್ನೆ (ಬುಧವಾರ) ದೆಹಲಿಯಿಂದ ಅಮೆರಿಕಕ್ಕೆ ಪ್ರಧಾನಿ ಪ್ರಯಾಣ ಬೆಳೆಸಿದ್ದು, ವಿಮಾನ ತಡೆ ರಹಿತವಾಗಿ ಸಂಚಾರ ನಡೆಸಿ ವಾಷಿಂಗ್ಟನ್ ಡಿಸಿಯಲ್ಲಿ ಮಳೆಯ ನಡುವೆಯೇ ಲ್ಯಾಂಡ್ ಆಗಿದೆ.

ಇನ್ನೊಂದು ಟ್ವೀಟ್‌ನಲ್ಲಿ ಮೋದಿಯವರು, ‘ವಾಷಿಂಗ್ಟನ್‌ನಲ್ಲಿ ಲ್ಯಾಂಡ್ ಆಗಿದ್ದೇನೆ. ಮುಂದಿನ ಎರಡು ದಿನ ಅಮೆರಿಕ ಅಧ್ಯಕ್ಷರಾದ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದಾ ಸುಗಾ ಭೇಟಿ ಮಾಡಲಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿನ ಜಾಯಿಂಟ್ ಬೇಸ್ ಆಂಡ್ಯೂಸ್ ನಲ್ಲಿ ಅಮೆರಿಕ ಅಧಿಕಾರಿಗಳು ಮೋದಿಯವರನ್ನು ಬರಮಾಡಿಕೊಂಡ್ಡಾರೆ. ಭಾರತದ ಅಮೆರಿಕ ರಾಯಭಾರಿ ತರಂಜಿತ್ ಸಿಂಗ್ ಸಂಧು, ಬ್ರಿಗೇಡಿಯರ್ ಅನೂಪ್ ಸಿಂಘಾಲ್, ಏರ್ ಕಮಾಡೋರ್ ಅಂಜನ್ ಭದ್ರ ಮತ್ತು ನೌಕಾ ಅಟ್ಯಾಚ್ ಕಮೋಡೋರ್ ನಿರ್ಭಯಾ ಬಾ ಸೇರಿದಂತೆ ರಕ್ಷಣಾ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೋದಿಯವರು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿಯೂ ಭಾಗವಹಿಸಲಿದ್ದು, ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

Leave A Reply

Your email address will not be published.