ಇನ್ಸ್ಟಾಗ್ರಾಮ್ ನಲ್ಲಿ ಬಂದೂಕು ಹಿಡಿದು ವಿಡಿಯೋ ಮಾಡಿ ಕಾನ್ಸ್ಟೇಬಲ್ ಹುದ್ದೆಯಿಂದ ಅಮಾನತುಗೊಂಡಿದ್ದ ಪ್ರಿಯಾಂಕಾ ಮಿಶ್ರಾಗೆ ಬರುತ್ತಿದೆಯಂತೆ ಸಾಲುಸಾಲು ಮಾಡೆಲಿಂಗ್ ಆಫರ್ ಗಳು !!
ಕರ್ತವ್ಯದ ವೇಳೆಯಲ್ಲಿ ಉತ್ತರ ಪ್ರದೇಶ ಆಗ್ರಾದ ಮಹಿಳಾ ಕಾನ್ಸ್ಟೇಬಲ್ ಪ್ರಿಯಾಂಕಾ ಮಿಶ್ರಾ ಬಂದೂಕು ಹಿಡಿದು ವಿಡಿಯೋ ಮಾಡಿ ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು,ಆ ವಿಡಿಯೋ ಬಹಳ ವೈರಲ್ ಆಗಿ ಕೊನೆಗೆ ಆ ಕಾನ್ಸ್ಟೇಬಲ್ ಅನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಇದೀಗ ಇನ್ಸ್ಟಾಗ್ರಾಮ್ ವಿಡಿಯೋಗಳಿಂದ ಖ್ಯಾತರಾದ ಪ್ರಿಯಾಂಕಾ ಮಿಶ್ರಾಗೆ ಈಗ ವೆಬ್ ಸರಣಿ ಮತ್ತು ಮಾಡೆಲಿಂಗ್ನ ಅವಕಾಶಗಳು ಅರಸಿ ಬಂದಿವೆ ಎಂದು ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸದಾ ಸಕ್ರಿಯವಾಗಿರುತ್ತಿದ್ದ ಪ್ರಿಯಾಂಕಾ ಪಿಸ್ತೂಲು ಹಿಡಿದುಕೊಂಡು, ‘ಉತ್ತರ ಪ್ರದೇಶದಲ್ಲಿ ಐದು ವರ್ಷದ ಹುಡುಗರು ಸಹ ಪಿಸ್ತೂಲು ಚಲಾಯಿಸುತ್ತಾರೆ” ಎಂದು ಸ್ಟೈಲ್ ಆಗಿ ವಿಡಿಯೋ ಒಂದನ್ನು ಮಾಡಿದ್ದರು. ಇದು ಉತ್ತರ ಪ್ರದೇಶ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿ ಪ್ರಿಯಾಂಕಾ ಮಿಶ್ರಾರನ್ನು ಅಮಾನತು ಮಾಡಲಾಗಿತ್ತು. ಇದರಿಂದ ಬೇಸರಗೊಂಡಿದ್ದ ಆಕೆ ಪೊಲೀಸ್ ಇಲಾಖೆಗೆ ರಾಜಿನಾಮೆ ಸಲ್ಲಿಸಿದ್ದರು.
ಕೆಲಸಕ್ಕೆ ರಾಜೀನಾಮೆ ಕೊಟ್ಟ ಬಳಿಕ ವೆಬ್ ಸರಣಿ ಹಾಗೂ ಮಾಡೆಲಿಂಗ್ನಲ್ಲಿ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ಜೀವನದಲ್ಲಿ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚೆನ್ನಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ವೆಬ್ ಸರಣಿಯಲ್ಲಿ ನಟಿಸುವುದಕ್ಕೆ ಈಗಿನ್ನೂ ಒಪ್ಪಿಗೆ ಕೊಟ್ಟಿಲ್ಲ ಎಂದಿದ್ದಾರೆ.
ಪೊಲೀಸ್ ಇಲಾಖೆಯ ತರಬೇತಿಯ ಸಮಯದಲ್ಲಿ ಅವರ ತರಬೇತಿಗಾಗಿ ಹಣವನ್ನು ಖರ್ಚು ಮಾಡಿರುವುದರಿಂದ ಪ್ರಿಯಾಂಕಾ ಮಿಶ್ರಾ ಅವರಿಗೆ ಒಂದು ಲಕ್ಷ 52 ಸಾವಿರ ರೂಪಾಯಿಗಳನ್ನು ಜಮಾ ಮಾಡುವಂತೆ ಇಲಾಖೆ ನೋಟಿಸ್ ನೀಡಿದೆ.
ಇದೀಗ ಪ್ರಿಯಾಂಕ ವೆಬ್ ಸರಣಿಯತ್ತ ಚಿತ್ರ ಹರಿಸುವರೇ ಎಂಬ ಕಾತರ ಎಲ್ಲರಲ್ಲೂ ಮೂಡಿದೆ. ದಕ್ಷ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುವ ಬದಲು ಈ ರೀತಿ ಮಾಡಿರುವುದಕ್ಕೆ ಹಲವು ನೆಟ್ಟಿಗರು ಆಕೆಯನ್ನು ಛೇಡಿಸಿದ್ದಾರೆ. ಆದರೆ ಇವುಗಳನ್ನೆಲ್ಲ ತಲೆಗೆ ಹಾಕಿಕೊಳ್ಳದೆ ಪ್ರಿಯಾಂಕ ಮುಂದೇನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.