ಅತೀ ಸಣ್ಣ ಪ್ರಾಯದಲ್ಲಿ ಈಕೆಯ ಸಾಧನೆಗೆ ಹತ್ತೂರಿನಿಂದಲೂ ಮೆಚ್ಚುಗೆ!!ಗಾಯನ, ನಿರೂಪಣೆಯಲ್ಲಿ ಸೆಡ್ಡು ಹೊಡೆಯಬಲ್ಲ ಪ್ರತಿಭಾನ್ವಿತೆ|
ಹಾಡುಗಾರಿಕೆಯಲ್ಲಿ ಮಿಂಚುತ್ತಿರುವ ನಮ್ಮೂರ ಪ್ರತಿಭೆ, ಕುಮಾರಿ ಅಕ್ಷತಾ ದೇವಯ್ಯ ಹೊಸಮಠ
ಆಕೆ ಜನಿಸುತ್ತಲೇ ಕಲಾ ಮಾತೆಯ ಸೇವೆಗೆ ಕಲಾಮಾತೆಯ ಪಾಲಿಗೆ ಒಲಿದಿದ್ದಾಳೆ , ಬೆಳೆಯುತ್ತಲೇ ತನ್ನಲ್ಲಿರುವ ಅದ್ಭುತ ಸಂಗೀತ ಪ್ರತಿಭೆಗೆ ತನ್ನ ಪೋಷಕರ ಪ್ರೋತ್ಸಾಹವನ್ನೂ ಪಡೆದುಕೊಂಡಿದ್ದಾಳೆ. ನಿತ್ಯವೂ ತನ್ನ ಗಾನ ಸಿರಿಕಂಠವನ್ನು ಬಳಸಿಕೊಂಡು ಹಲವು ಕೇಳುಗರನ್ನು, ಅಭಿಮಾನಿಗಳನ್ನು ಸಂಪಾದಿಸಿಕೊಳ್ಳುತ್ತಿದ್ದಾಳೆ. ಹಲವಾರು ಸಮಾರಂಭಗಳಲ್ಲಿ ತನ್ನ ಹಾಡಿನ ಮೂಲಕ ಜನರ ಮನಸ್ಸನ್ನು ಗೆದ್ದು, ಹಲವಾರು ಆಡಿಷನ್ ಗಳಲ್ಲೂ ತೀರ್ಪುಗಾರರಿಂದ ಶಹಬ್ಬಾಶ್ ಗಿರಿಯನ್ನು ಪಡೆದುಕೊಂಡ, ಸದ್ಯ ಯುಟ್ಯೂಬ್ ಚಾನೆಲ್ ಒಂದಕ್ಕೆ ಹಾಡುಗಾರ್ತಿ ಹಾಗೂ ನಿರೂಪಕಿಯಾಗಿ ಆಯ್ಕೆಗೊಂಡ ನಮ್ಮೂರಿನ ಹೆಮ್ಮೆಯ ಪ್ರತಿಭೆ, ಅದ್ಭುತ ಕಂಠದ ಗಾಯಕಿ, ನಿರೂಪಕಿ ಅಕ್ಷತಾ ದೇವಯ್ಯ ಹೊಸಮಠ.
ಬೆಳೆಯುತ್ತಿರುವ ಸಿರಿ ಮೊಳಕೆಯಲ್ಲಿ ಎಂಬ ಹಿರಿಯರ ಆ ವೇದ ವಾಕ್ಯ ಈಕೆಗೆ ಹೊಂದಿಕೆಯಾಗುತ್ತದೆ ಎಂದರೆ ತಪ್ಪಾಗದು. ಕಡಬ ತಾಲೂಕು ಕುಟ್ರುಪಾಡಿ ಗ್ರಾಮದ ಹೊಸಮಠ ಚೆವುಡೇಲು ಶ್ರೀ ದೇವಯ್ಯ ಮತ್ತು ಶ್ರೀಮತಿ ಸುಗುಣ ದೇವಯ್ಯ ಅವರ ಪುತ್ರಿಯಾಗಿ 27-09-2010 ರಲ್ಲಿ ಜನಿಸಿದ ಅಕ್ಷತಾ ಸದ್ಯ ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಟ್ರುಪಾಡಿಯಲ್ಲಿ ಪಡೆಯುತ್ತಿದ್ದಾರೆ.
ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತಿ:
ಹೌದು,ಚಿಕ್ಕಂದಿನಲ್ಲಿ ತಂದೆ-ತಾಯಿಯಿಂದ ತನ್ನ ಪ್ರತಿಭೆಯನ್ನು ಗುರುತಿಸಲ್ಪಟ್ಟ ಅಕ್ಷತಾ, ಕಡಬ ಸಮೀಪದ ಮರ್ದಾಳ ಎಂಬಲ್ಲಿ ಕಿರಣ್ ಕುಮಾರ್ ಗಾನಸಿರಿ ನಡೆಸುತ್ತಿದ್ದ ಸಂಗೀತ ಕಲಾಶಾಲೆಯಲ್ಲಿ, ತನ್ನ ಪ್ರತಿಭೆಯನ್ನು ಫಲವತ್ತಾಗಿಸಿಕೊಂಡಿದ್ದಾರೆ.ಅಲ್ಲಿಂದಲೇ ಈಕೆಯ ಕಲಾ ಪಯಣ ಶುರುವಾಗಿತ್ತಾದರೂ,ಪ್ರಸ್ತುತ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿರುವ ರವಿ ಬಿಜೂರು ಅವರ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಹಲವಾರು ಖ್ಯಾತ ಗಾಯಕರುಗಳೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವುದರ ಜೊತೆಗೆ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಗ್ರಾಮೀಣ ಪ್ರತಿಭೆ ಅಕ್ಷತಾ, ಚಿಣ್ಣರ ಲೋಕ ಬಂಟ್ವಾಳ ಆಯೋಜಿಸಿದ್ದ ಕರಾವಳಿ ಸರಿಗಮಪ ಸಂಗೀತ ಸ್ಪರ್ಧೆಯ ಸೆಮಿಫೈನಲಿಸ್ಟ್.
ಸಂಗೀತ ಮಾತ್ರವಲ್ಲದೆ ನಿರೂಪಣೆ, ನಟನೆಯಲ್ಲೂ ಸೈ ಎನಿಸಿಕೊಂಡಿರುವ ಅಕ್ಷತಾ ದೇವಯ್ಯ ಇದೀಗ ಕಡಬದ ಸ್ಥಳೀಯ ಯುಟ್ಯೂಬ್ ಚಾನೆಲ್ SKCK ಯಲ್ಲಿ ತನ್ನ ಪ್ರತಿಭೆಯನ್ನು ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಈಕೆಯ ಕಲಾ ಸೇವೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಹತ್ತೂರಿನಿಂದಲೂ ಸಿಗಲಿ,ಹತ್ತು ಹಲವು ಹಾಡುಗಳು ಈಕೆಯ ಕಂಠಸಿರಿಯಲ್ಲಿ ಮೂಡಿಬರಲಿ, ಆ ಮೂಲಕ ಗುರುವನ್ನು ಮೀರಿಸಿದ ಶಿಷ್ಯೆಯಾಗಿ ಭವಿಷ್ಯದಲ್ಲಿ ಉತ್ತಮ ಗಾಯಕಿಯಾಗಿ ರಾಜ್ಯ, ಜಿಲ್ಲೆ, ರಾಷ್ಟ್ರವೇ ಗುರುತಿಸಲಿ ಎಂಬುದೇ ನಮ್ಮ ಆಶಯ.