ಮಹಿಳೆಯೊಂದಿಗೆ ಅಸಭ್ಯ ವರ್ತನೆ,ಹಲ್ಲೆ, ಜೀವ ಬೆದರಿಕೆ | ಮಾಜಿ ಕಾರ್ಪೋರೇಟರ್ ಬಂಧನ

ಮಹಿಳೆಯ ಜತೆ ಅಸಭ್ಯ ವರ್ತನೆ ಮಾಡಿದ್ದಲ್ಲದೇ ಹಲ್ಲೆ, ಜೀವ ಬೆದರಿಕೆ ಹಾಕಿದ ಆರೋಪದಡಿ ಹುಬ್ಬಳ್ಳಿ- ದಾರವಾಡ ನಗರ ಪಾಲಿಕೆಯ ಮಾಜಿ ಸದಸ್ಯ ಶ್ರೀಕಾಂತ ಜಮನಾಳನನ್ನು ವಿದ್ಯಾಗಿರಿ ಠಾಣೆ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಉದಯಗಿರಿ ನಿವಾಸಿ ಅನುಮತಿ ಕಲ್ಲೇಶ ಅತ್ತಿಗೇರಿ (35)ಎಂಬುವರೇ ಜಮನಾಳ ವಿರುದ್ದ ಠಾಣೆಗೆ ದೂರು ನೀಡಿದ ಮಹಿಳೆ. ಕಳೆದ 8 ವರ್ಷ ಹಿಂದೆ ನಡೆದ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 3ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಎತ್ತಿನಗುಡ್ಡದ ಶ್ರೀಕಾಂತ (ತಿರುಕಪ್ಪ) ಸಾದೇವಪ್ಪ ಜಮನಾಳ ಪರ ಈ ಮಹಿಳೆ ಪ್ರಚಾರ ಮಾಡಿದ್ದಳು. ಈ ಪ್ರಚಾರ ವೇಳೆ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದ ಶ್ರೀಕಾಂತ, ಆಕೆಯ ಗಂಡನೊಂದಿಗೆ ಪರಿಚಯ ಮಾಡಿಕೊಂಡಿದ್ದ. ಇದಾದ ಬಳಿಕ ಮಹಿಳೆಯು ಗಂಡನೊಂದಿಗೆ ಜಗಳವಾಡಿ, ತವರು ಮನೆಗೆ ಬಂದು ಉಳಿದುಕೊಂಡಿದ್ದಾಳೆ.

ಹಳೆಯ ಪರಿಚಯ ಮೇಲೆ ಮಹಿಳೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ ಶ್ರೀಕಾಂತ, ನನ್ನೊಂದಿಗೆ ಸಂಬಂಧ ಇಟ್ಟಿಕೋ. ಇಲ್ಲವಾದರೆ ಗಂಡ, ಮಕ್ಕಳು ಸೇರಿ ನಿನ್ನ ಕೂಡ ಸಾಯಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ಇದಲ್ಲದೇ ಮಹಿಳೆ ಹಿಂಬಾಲಿಸಿಕೊಂಡು ಆಗಾಗ ರಸ್ತೆಯಲ್ಲಿ ಕಿರುಕುಳ ನೀಡಿದ್ದು, ಸೆ.೭ ರಂದು ರಾತ್ರಿ ೮:೦೦ ಗಂಟೆಗೆ ಮನೆಗೆ ಬರುವುದಾಗಿ ಹೇಳಿದ್ದಾನೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳೆ, ಮನೆಗೆ ಬರದಂತೆ ಹೇಳಿದ್ದಾಳೆ. ಇದಾದ ಬಳಿಕ ಸೆ.೮ ರಂದು ಬೆಳಿಗ್ಗೆ ಮಹಿಳೆಯ ಮನೆಗೆ ಹೋಗಿದ್ದು, ಮಹಿಳೆ ಬಾಗಿಲು ತೆರೆದಿಲ್ಲ. ಕೊನೆಗೆ ಮನೆಯ ಬಾಗಿಲು ಒಡೆದು ಒಳನುಗ್ಗಿದ ಶ್ರೀಕಾಂತ, ಮಹಿಳೆಯನ್ನು ಹೊರಗಡೆ ಎಳೆ ತಂದು ಎಳೆದಾಡಿದ್ದಾನೆ. ಇದಲ್ಲದೇ ಕಟ್ಟಿಗೆಯಿಂದ ಹೊಡೆದಿದ್ದು, ಅಲ್ಲದೇ ನನ್ನ ಜತೆ ಇರು. ಇಲ್ಲವಾದರೆ ಸಾಯಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ. ಈ ರೀತಿ ಕಿರುಕುಳ ನೀಡುತ್ತಿರುವುದಾಗಿ ಅನುಮತಿ ಅತ್ತೀಗೇರಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಈ ದೂರಿನಂತೆ ವಿದ್ಯಾಗಿರಿ ಠಾಣೆಯ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಶ್ರೀಕಾಂತ ಜಮುನಾಳ ಜೆಡಿಎಸ್ ನಿಂದ ಸ್ಪರ್ಧಿಸಿ ಹುಬ್ಬಳ್ಳಿ-ಧಾರಾವಾಡ ಮಹಾನಗರ ಪಾಲಿಕೆ ಸದಸ್ಯರಾಗಿದ್ದರು.

Leave A Reply

Your email address will not be published.