ಹಣದ ಆಸೆಗೆ ಬಿದ್ದು ತಾಯಿಯನ್ನೇ ಜೀವಂತವಾಗಿರಿಸಿದ ಕಹಾನಿ!!|
ಬರೋಬ್ಬರಿ 43.4 ಲಕ್ಷ ರೂ. ಗಳಿಸಿ ಕೊನೆಗೆ ಆದದ್ದು ಆದರೂ ಏನು!!?
ಹಣ ನೋಡಿದರೆ ಹೆಣವು ಬಾಯಿ ಬಿಡುತ್ತದೆ ಎಂಬ ಮಾತಿದೆ. ಆದರೆ ಇಲ್ಲೊಂದು ಘಟನೆ ತದ್ವಿರುದ್ದವಾಗಿ ನಡೆದಿದ್ದು ಹಣದ ಆಸೆಗೆ ಬಿದ್ದು ತಾಯಿಯ ಮೃತ ದೇಹವನ್ನೇ ಜೋಪಾನವಾಗಿಟ್ಟು ಕಾಪಾಡಿದ ಮಗ.
ಹೌದು, ಈತ ತಾಯಿಯ ಮೇಲಿನ ಪ್ರೀತಿ ಮೇಲೆ ಮೃತ ದೇಹ ಇಟ್ಟುಕೊಂಡಿದ್ದಾನೆ ಎಂದು ನೀವು ಯೋಚಿಸಿದರೆ ಅದು ಸುಳ್ಳು.ಮೃತರ ಮಗ ದುಡ್ಡಿನ ಆಸೆಗೆ ಬಿದ್ದು, ತಾಯಿ ಮರಣ ಹೊಂದಿದ್ದರೂ ಆಕೆಯ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಆಕೆಯ ಮೃತದೇಹವನ್ನು ಸುಮಾರು 1 ವರ್ಷಗಳ ಕಾಲ ಸಂರಕ್ಷಿಸಿದ ಪ್ರಕರಣ ಆಸ್ಟ್ರಿಯದಲ್ಲಿ ಬೆಳಕಿಗೆ ಬಂದಿದೆ.
ತಾಯಿಯ ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಈ ರೀತಿ ಮಾಡಿದ್ದಾನೆಂದು ತಿಳಿದುಬಂದಿದ್ದು,ಸ್ಥಳೀಯ ಮಾಧ್ಯಮಗಳ ಪ್ರಕಾರ 89 ವರ್ಷದ ಮಹಿಳೆಯ ಮೃತದೇಹವನ್ನು ಆಸ್ಟ್ರಿಯಾ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದ ಹಿರಿಯ ಮಹಿಳೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಮೃತಪಟ್ಟಿದ್ದರು. ಆಕೆಯ ಮೃತದೇಹದೊಂದಿಗೆ 66 ವರ್ಷದ ಮಗ ಕಳೆದ ಒಂದು ವರ್ಷದಿಂದ ಆಸ್ಟ್ರೀಯಾದ ಟೈರೂಲ್ ವಲಯದಲ್ಲಿರುವ ನಿವಾಸದಲ್ಲಿ ಜೀವಿಸುತ್ತಿದ್ದ.ಇದರ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಚಾರಣೆ ವೇಳೆ ಹಲವು ವಿಚಾರಗಳನ್ನು ಮೃತರ ಮಗ ಬಿಚ್ಚಿಟ್ಟಿದ್ದಾನೆ. ಮೃತದೇಹ ಕೆಡದಿರಲಿ ಎಂದು ಐಸ್ ಪ್ಯಾಕ್ ಬಳಸಿದ್ದಾನೆ. ಅಲ್ಲದೆ, ವಾಸನೆ ಹರಡದಿರಲಿ ಎಂದು ಮನೆ ಬೇಸ್ಮೆಂಟ್ನಲ್ಲಿ ಇಟ್ಟಿದ್ದಾನೆ ಮತ್ತು ಮೃತದೇಹದಿಂದ ದ್ರವಗಳು ಹೊರಹೊಮ್ಮುವುದನ್ನು ತಡೆಯಲು ಬ್ಯಾಂಡೇಜ್ನಿಂದ ಶವವನ್ನು ಸುತ್ತಿಟ್ಟಿದ್ದಾನೆ. ಬಳಿಕ ಒಂದು ಬಾಕ್ಸ್ನಲ್ಲಿಟ್ಟು ಒಂದು ವರ್ಷ ಕಾಲ ಕಳೆದಿದ್ದಾನೆ.
ಆತನ ಸಹೋದರಿಗೆ ತಾಯಿ ಆಸ್ಪತ್ರೆಯಲ್ಲಿರುವುದಾಗಿ ಸುಳ್ಳು ಹೇಳಿದ್ದಾನೆ.ಹೀಗೆ ತಾಯಿಯ ಹೆಸರಿನಲ್ಲಿ ಕಳೆದ ಒಂದು ವರ್ಷದಲ್ಲಿ 50,000 ಯೂರೋ ಪಡೆದುಕೊಂಡಿದ್ದಾನೆ. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 43.4 ಲಕ್ಷ ರೂ. ಹಣವನ್ನು ಮಗ ಸ್ವೀಕರಿಸಿದ್ದಾನೆ.
ಮಹಿಳೆಗೆ ಹೆಸರಿನಲ್ಲಿದ್ದ ಪ್ರಯೋಜನಗಳು ಆಕೆಯ ಪಿಂಚಣಿ ಹಣವನ್ನು ಆತ ಪಡೆದುಕೊಳ್ಳುತ್ತಿದ್ದ. ಆದರೆ, ಇತ್ತೀಚೆಗೆ ಹೊಸ ಪೋಸ್ಟ್ಮ್ಯಾನ್ ಫಲಾನುಭವಿನ ಮುಖವನ್ನು ನೋಡಲು ಒತ್ತಾಯಿಸಿದರು. ಆದರೆ, ಮಗ ಅದನ್ನು ನಿರಾಕರಿಸಿದನು. ಇದು ಪೋಸ್ಟ್ಮ್ಯಾನ್ ಅನುಮಾನಕ್ಕೆ ಕಾರಣವಾಗಿ ಕೊನೆಗೆ ಆತ ತನ್ನ ಹಿರಿಯ ಅಧಿಕಾರಿಗಳಿಗೆ ಈ ಸಂಬಂಧ ದೂರು ಸಹ ನೀಡಿದ್ದನು.
ನಂತರ ಪೊಲೀಸರ ಮೂಲಕ ವಿಚಾರಣೆ ನಡೆಸಿದಾಗ ತಾಯಿ ಮೃತಪಟ್ಟು ಒಂದು ವರ್ಷವಾಗಿದ್ದು, ಆಕೆ ಮೃತದೇಹವನ್ನು ಬೇಸ್ಮೆಂಟ್ನಲ್ಲಿ ಸಂರಕ್ಷಿಸಿ ಇಟ್ಟಿರುವುದು ಬೆಳಕಿಗೆ ಬಂದಿದೆ.
ಈ ಹಿಂದೆ ಇದೇ ರೀತಿಯ ಘಟನೆ ಕೋಲ್ಕತ್ತಾದ ಬೆಹಾಲಾ ಪ್ರದೇಶದಲ್ಲಿಯೂ ನಡೆದಿತ್ತು.ವ್ಯಕ್ತಿಯೊಬ್ಬ ತನ್ನ ತಾಯಿಯ ದೇಹವನ್ನು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಫ್ರೀಜರ್ನಲ್ಲಿ ಸಂರಕ್ಷಿಸಿದ್ದ. ಮೊದಲಿಗೆ, ಅವನು ತನ್ನ ತಾಯಿಯನ್ನು ಬಿಡಲು ಬಯಸುವುದಿಲ್ಲ ಎಂದು ಹೇಳಿದನು, ನಂತರ ವಿಚಾರಣೆಯಲ್ಲಿ ಅವನು ನಿರುದ್ಯೋಗಿ ಮತ್ತು ತನ್ನ ತಾಯಿಯ ಪಿಂಚಣಿಯಲ್ಲಿ ಬದುಕುತ್ತಿದ್ದನೆಂದು ಒಪ್ಪಿಕೊಂಡಿದ್ದನು.