ಇಲಾಖೆಯಲ್ಲಿ ಭ್ರಷ್ಟಾಚಾರವೆಸಗಿ ನಷ್ಟಉಂಟುಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ!! ತಮ್ಮ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಗುಡುಗಿದ ಇಂಧನ ಸಚಿವ ಸುನಿಲ್ ಕುಮಾರ್
ವಿದ್ಯುತ್ ಬಿಲ್ ನಲ್ಲಿ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡಿದ ಮೂವರು ಸಿಬ್ಬಂದಿಯನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮುಳಬಾಗಿಲು ಉಪವಿಭಾಗದ ಕಿರಿಯ ಸಹಾಯಕ ಮೆಹಬೂಬ್ ಪಾಷ, ಕಿರಿಯ ಸಹಾಯಕಿಯರಾದ ಗಾಯತ್ರಮ್ಮ ಹಾಗೂ ಸುಜಾತಮ್ಮ ಎಂಬುವವರನ್ನು ಅಮಾನತು ಮಾಡಲಾಗಿದೆ.
ಇವರು ಪ್ರತಿ ಗ್ರಾಹಕರಿಗೆ ವಿದ್ಯುತ್ ಬಿಲ್ ವಿತರಿಸುವ ವೇಳೆಯಲ್ಲಿ ಕೆಲವು ಬಿಲ್‌ಗಳನ್ನು ಮಾರ್ಪಾಟು ಮಾಡಿ ಅದರ ಮೊತ್ತವನ್ನು ಕಡಿಮೆ ಮಾಡಿ ಆ ಮೂಲಕ ಬೆಸ್ಕಾಂ ಬರಬೇಕಾದ ವಾಸ್ತವಿಕ ಆದಾಯದಲ್ಲಿ ನಷ್ಟ ಉಂಟಾಗಲು ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಮೇಲೆ ಕೋಲಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ತಾವು ಇಲಾಖೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ಅಕ್ರಮ ಎಸಗಿ ಆ ಮೂಲಕ ಇಲಾಖೆಗೆ ನಷ್ಟವುಂಟು ಮಾಡುವ ಯಾವುದೇ ಅಧಿಕಾರಿ, ಸಿಬ್ಬಂದಿ ಇರಲಿ ಅವರ ಮೇಲೆ ಮುಲಾಜಿಲ್ಲದ ಕ್ರಮ ವಹಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಪ್ರಸ್ತುತ ಈ ಮೂವರು ಸಿಬ್ಬಂದಿಗಳು ಬೇರೆ, ಬೇರೆ ಐಪಿ ವಿಳಾಸಗಳ ಗಣಕಯಂತ್ರಗಳಲ್ಲಿ ಐಡಿ ಗಳನ್ನು ಉಪಯೋಗಿಸಿ ವಂಚನೆ ಎಸಗಿರುವುದು ದೃಢವಾಗಿರುವುದರಿಂದ ಹಾಗೂ 8 ಆರ್ ಆರ್ ಸಂಖ್ಯೆಗಳಲ್ಲಿ ಒಟ್ಟು 444966-00 ಗಳಷ್ಟು ಮೊತ್ತ ಕಂಪನಿಗೆ ನಷ್ಟವಾಗಿರುವುದರಿಂದ ಇವರ ಮೇಲೆ ಇಲಾಖಾ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ, ಜೊತೆಗೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯನ್ನು ಸಹ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.