ಬಾಲ್ಯವಿವಾಹ ತಡೆಯಬೇಕಿದ್ದ ಅಂಗನವಾಡಿ ಕಾರ್ಯಕರ್ತೆಯಿಂದಲೇ ನಡೆಯಿತು ಅನ್ಯಾಯ !!ತನ್ನ ಅಪ್ರಾಪ್ತ ಮಗಳು ಹಾಗೂ ಆಕೆಯ ಪ್ರಿಯಕರನಿಗೆ ಮದುವೆ ನಡೆಸಿದ ಪ್ರಕರಣ
ನೆಲಮಂಗಲ: ಬಾಲ್ಯವಿವಾಹ ತಡೆಗಟ್ಟುವ ಎಲ್ಲಾ ಕಾನೂನುಗಳು ಜಾರಿಯಾಗಿದ್ದು, ಅವುಗಳನ್ನು ತಡೆಗಟ್ಟುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಂಗನವಾಡಿ ಕಾರ್ಯಕರ್ತೆ ತನ್ನ ಅಪ್ರಾಪ್ತ ಮಗಳಿಗೆ ಬಾಲ್ಯವಿವಾಹ ನಡೆಸಿದ್ದು,ಇಡೀ ಅಂಗನವಾಡಿ ಕಾರ್ಯಕರ್ತೆಯರ ಪಾಲಿಗೆ ಕಪ್ಪುಚುಕ್ಕೆಯಾಗಿದೆ.ಇಲ್ಲಿನ ನಗರಸಭೆ ವ್ಯಾಪ್ತಿಯ ಕೋಟೆ ಬೀದಿ ಎಂಬಲ್ಲಿನ ಅಂಗನವಾಡಿ ಕಾರ್ಯಕರ್ತೆ ಯೊಬ್ಬರ ಸಮ್ಮುಖದಲ್ಲೇ ಅಪ್ರಾಪ್ತ ಪ್ರೇಮಿಗಳಿಬ್ಬರ ವಿವಾಹ ನಡೆದಿದ್ದು, ಸದ್ಯ ಬಾಲ್ಯ ವಿವಾಹ ಪ್ರಕರಣವು ಠಾಣೆ ಮೆಟ್ಟಿಲೇರಿದೆ.
ಘಟನೆ ವಿವರ :ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದ ಬಾಲಕಿ ಹಾಗೂ ಬಾಲಕನ ನಡುವೆ ಪರಸ್ಪರ ಪ್ರೇಮಾಂಕುರವಾಗಿದ್ದು,ಇಬ್ಬ ರೂ ಕದ್ದುಮುಚ್ಚಿ ಭೇಟಿಯಾಗುತ್ತಿದ್ದರು. ಬಾಲಕಿ ತಾಯಿ ಅಂಗನವಾಡಿ ಕಾರ್ಯಕರ್ತೆ ಯಾಗಿದ್ದು, ತಾಯಿಗೆ ಮಗಳ ಲವ್ ಸ್ಟೋರಿ ಗೊತ್ತಾಗುತ್ತಿದ್ದಂತೆ ಈ ಸಂಬಂಧ ಮಾತುಕತೆ ನಡೆಸುವ ನೆಪದಲ್ಲಿ ಬಾಲಕ ಹಾಗೂ ಆತನ ತಾಯಿಯನ್ನು ಮನೆಗೆ ಕರೆಸಿಕೊಂಡಿದ್ದರು. ಅಲ್ಲಿಯೇ ಏಕಾಏಕಿ ಮಗಳನ್ನು ಮದುವೆಯಾಗುವಂತೆ ಹೇಳಿ ಬಾಲಕನ ತಾಯಿ ಸಮ್ಮುಖದಲ್ಲೇ ಅಂಗನವಾಡಿ ಕಾರ್ಯಕರ್ತೆ ತನ್ನ ಮಗಳ ಮದುವೆ ಶಾಸ್ತ್ರ ಮಾಡಿ ಮುಗಿಸಿದ್ದಾರೆ.ಜು.27ರಂದು ವಿವಾಹ ನೆರವೇರಿದ್ದು, ಇ.ಸ್ಟಾಂಪ್ ಪತ್ರದಲ್ಲಿ ಬಾಲಕ ಹಾಗೂ ಆತನ ತಾಯಿ ಸಹಿ ಪಡೆದು ವಿವಾಹಕ್ಕೆ ಸಾಕ್ಷಿಧಾರನ್ನಾಗಿ ಮಾಡಿಕೊಂಡು ಅಂಗನವಾಡಿ ಕಾರ್ಯಕರ್ತೆ ಸಮ್ಮುಖದಲ್ಲೇ ಬಾಲಕಿಗೆ ಮಾಂಗಲ್ಯಧಾರಣೆ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಾಲ್ಯವಿವಾಹ ನಡೆದಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ಬಂದ ದೂರಿನನ್ವಯ ತಾಲೂಕು ಮಕ್ಕಳ ಸಹಾಯವಾಣಿ ಸಂಯೋಜಕ ದಿನೇಶ್ ನೇತೃತ್ವದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಸೆ.3ರಂದು ನಗರ ಪೊಲೀಸ್ ಠಾಣೆಯಲ್ಲಿ ಬಾಲಕ ಹಾಗೂ ಬಾಲಕಿಯ ವಿರುದ್ಧ ದೂರೊಂದನ್ನು ದಾಖಲಿಸಲಾಗಿದೆ.