ನೋಡನೋಡುತ್ತಿದ್ದಂತೆಯೇ ಕರಾವಳಿಯಲ್ಲಿ ಪತ್ತೆಯಾಯಿತು ಮನುಷ್ಯನ ಮುಖವನ್ನು ಹೋಲುವ ಗೊಂಚಲು ಕೊಂಬುಗಳಿರುವ ವಿಚಿತ್ರ ಜೀವಿ| ನೀಲ ಬಣ್ಣದ ಭಯಂಕರ ಜೀವಿ ಕಂಡು ಭಯಭೀತರಾದ ಜನತೆ!!
ನಿಗೂಢ ಜೀವಿಯೊಂದು ಉಡುಪಿ ಜಿಲ್ಲೆಯಲ್ಲಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ. ಎಂದೋ ಒಂದಿನ ಹಾಲಿವುಡ್ ಸಿನಿಮಾದಲ್ಲಿ ನೋಡಿದ ಆ ಒಂದು ಜೀವಿಯು ದೊಪ್ಪನೇ ಕಣ್ಣೆದುರು ಬಂದು ನಿಂತ ಅನುಭವ. ಉಡುಪಿಯ ಕಟಪಾಡಿಯ ಆಸುಪಾಸಿನ ನಿರ್ಮಾಣ ಸಂಸ್ಥೆಗಳಲ್ಲಿ ಒಂದು ಸಂಜೆ ಪ್ರತ್ಯಕ್ಷವಾದಾಗ ಜನರಲ್ಲಿ ತಕ್ಷಣ ಡೋಲು ಬಡಿದುಕೊಂಡ ಅನುಭವ !
ಮಾನವನ ಮುಖದ, ಎಮ್ಮೆಯ ಹಣೆಯ, ಟಿಸಿಲೋಡೆದ ಕಡವೆಯ ಕೊಂಬಿನ ದೈತ್ಯ ದೇಹದ, ಹಾರಲು ಬೃಹತ್ ರೆಕ್ಕೆಗಳು,ಮೈತುಂಬಾ ಕಪ್ಪಾದ ಬಣ್ಣವನ್ನು, ನೀಲನೆಲ ಕಿರಣಗಳನ್ನು ಬೀಳುವ ವಿಕಾರವಾದ ಕಣ್ಣುಗಳನ್ನು ಹೊಂದಿರುವಂತಹ ಈ ಜೀವಿಯ ಕ್ರೂರ ಮುಖ ಜನರನ್ನು ಬೆದರಿಸಿ ಕಳಿಸಿತ್ತು.
ಅದೆಷ್ಟು ಸದ್ದು ಮಾಡಿತೆಂದರೆ, ಕರಾವಳಿ ಜನತೆಯ ಬಾಯಲ್ಲಿ ಆ ಜೀವಿಯದ್ದೇ ಮಾತು,ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಆ ಜೀವಿಯದ್ದೇ ಮಾತು. ಹಾಗಾದರೆ ಆ ಜೀವಿಯು ಯಾವುದು? ಕರಾವಳಿಗೆ ಆ ಜೀವಿ ಬರಲು ಕಾರಣವಾದರೂ ಏನೆಂಬುವ ವಾಸ್ತವ ಆ ಬಳಿಕ ತಿಳಿದು ಬಂದಿದೆ. ಆ ಜೀವಿಯ ವೇಷದ ಹಿಂದೆ ಕರುಣಾಜನಕ ಕಥೆಯಿದೆ, ನೋವಿದೆ. ಅನೇಕ ಬಡವರ ನೋವನ್ನು ತಣಿಸುತ್ತೇನೆ ಎಂಬ ತೃಪ್ತಿ ಇದೆ.
ಸುಮಾರು ಆರು ವರ್ಷಗಳಿಂದ ಬಣ್ಣದ ವೇಷ ತೊಟ್ಟು ಅನೇಕ ಬಡ ಮಕ್ಕಳ ಪಾಲಿಗೆ ಬೆಳಕಾಗಿರುವ ರವಿ ಕಟಪಾಡಿ ಯವರೇ ಆ ಭಯಂಕರ ಜೀವಿಯ ಪಾತ್ರಧಾರಿ. ತನ್ನ ಕಿತ್ತು ತಿನ್ನುವ ಬಡತನದ ಮಧ್ಯೆ,ಪ್ರತೀ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ದಿನ ಏನಾದರೊಂದು ವಿಶೇಷವಾದ ವೇಷ ತೊಟ್ಟು ನೋಡುಗರ ಕಣ್ಮನ ಸೆಳೆದು ಅವರಿಂದ ದೇಣಿಗೆ ರೂಪದಲ್ಲಿ ಪಡೆದಂತಹ ಅಷ್ಟೂ ಮೊತ್ತವನ್ನು ನಿರ್ಗತಿಕ, ಅಸಹಾಯಕ ಬಡ ಮಕ್ಕಳ ಚಿಕಿತ್ಸೆಗೆ ನೀಡುತ್ತಿರುವುದು ಇವರ ಮಾನವೀಯ ಗುಣ.
ಜಿಲ್ಲೆಯಲ್ಲಿ ಅಚ್ಚರಿ ಮೂಡಿಸಿದ ಆ ವೇಷದ ಬಗೆಗೊಂದು ಸಾಲು ಹೇಳುವುದಾದರೆ, ಮೊದಲ ಬಾರಿಗೆ ಹಾಲಿವುಡ್ ನ ಚಿತ್ರವೊಂದರಲ್ಲಿ ಕಾಣಿಸಿಕೊಂಡ ಆ ಜೀವಿ ಇಂದು ಕರಾವಳಿಗರನ್ನು ಅರೆಕ್ಷಣ ಬೆಚ್ಚಿಬೀಳಿಸಿದೆ.ಒಂದು ಉತ್ತಮ ಸಮಾಜಸೇವೆಗಾಗಿ ಈ ವೇಷವನ್ನು ಕರಾವಳಿಯಲ್ಲಿ ಪರಿಚಯಿಸುವ ಕನಸುಕಂಡ ಕಟಪಾಡಿಯವರಿಗೆ ಜಿಲ್ಲಾಡಳಿತದಿಂದಲೂ ಅನುಮತಿ ದೊರಕಿತ್ತು.ಕಳೆದ ಬಾರಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಶೋ ನಲ್ಲಿ ಪಾಲ್ಗೊಂಡ ಕಟಪಾಡಿಯವರು,ಅದರಲ್ಲಿ ಬಂದ ಹಣವನ್ನೂ ಬಡಮಕ್ಕಳ ಕಲ್ಯಾಣಕ್ಕಾಗಿ ಬಳಸಿದ್ದಾರೆ.
ಒಟ್ಟಿನಲ್ಲಿ ಆ ಒಂದು ವಿಶೇಷ ಜೀವಿಯು ಕರಾವಳಿಯಾದ್ಯಂತ ಭಾರೀ ಸದ್ದು ಮಾಡಿದ್ದು, ಆ ವೇಷದ ಪಾತ್ರಧಾರಿ ರವಿ ಕಟಪಾಡಿಯವರ ಮಾನವೀಯ ಗುಣಕ್ಕೆ ಜನ ಫಿದಾ ಆಗಿದ್ದಾರೆ. ಅನೇಕ ಯುವ ಜನರ ಹೃದಯದಲ್ಲಿ ಮನೆಮಾಡಿರುವ ಕಟಪಾಡಿಯವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ತೆರೆಮರೆಯಲ್ಲಿ ಹಲವು ಬಾರಿ ಕೂಗೊಂದು ಕೇಳಿ ಬಂದಿತ್ತಾದರೂ, ಕಟಪಾಡಿಯವರ ಸೇವೆಗೆ ಒಂದಲ್ಲಾ ಒಂದು ದಿನ ಪ್ರಶಸ್ತಿ, ಸಮ್ಮಾನಗಳು ಒಲಿದು ಬರಲಿ, ಮುಂದೆಯೂ ಅನೇಕರ ಪಾಲಿಗೆ ಕಟಪಾಡಿ ಬೆಳಕಾಗಲಿ ಎಂಬುವುದೇ ಆಶಯ.