ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಅಭಿಮಾನದ ಹೆಸರಲ್ಲಿ ಸಾರ್ವಜನಿಕವಾಗಿ ಕೋಣ ಬಲಿಕೊಟ್ಟು ವಿಕೃತಿ ಮೆರೆದ ಅಭಿಮಾನಿಗಳು | ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಪರಾರಿಯಾದ ಆರೋಪಿಗಳು !!
ಸ್ಯಾಂಡಲ್‍ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಅಭಿಮಾನದ ಹೆಸರಲ್ಲಿ ಪ್ರಾಣಿ ಬಲಿ ಕೊಡುವ ಮೂಲಕ ವಿಕೃತಿ ಮೆರೆದಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ನಡೆದಿದೆ.
ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಸಾರ್ವಜನಿಕವಾಗಿ ಕೋಣ ಬಲಿಕೊಟ್ಟು ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ರಾಜ್ಯಾದ್ಯಂತ ಸುದೀಪ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಕೇಕ್ ಕತ್ತರಿಸಿ, ಬಡವರಿಗೆ ಊಟ ಹಾಕುವ ಮೂಲಕ ಆಚರಣೆ ಮಾಡಿದ್ದರೆ, ಬಳ್ಳಾರಿಯ ಸಂಡೂರು ತಾಲೂಕಿನ ಬಂಡ್ರಿಯಲ್ಲಿ ಅಭಿಮಾನಿಗಳು ನಡು ರಸ್ತೆಯಲ್ಲಿ ಕೋಣ ಬಲಿಕೊಡುವ ಮೂಲಕ ಹುಚ್ಚು ಅಭಿಮಾನ ಮೆರೆದಿದ್ದಾರೆ.
ಕೋಣ ಬಲಿಕೊಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನದ ಹೆಸರಲ್ಲಿ ಪ್ರಾಣಿ ಹಿಂಸೆ ಮಾಡಿ ವಿಕೃತಿ ಮೆರೆದ ಅಭಿಮಾನಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚೆಗೆ ಗೋಹತ್ಯೆ ನಿಷೇಧದ ಬಗ್ಗೆ ಹೊಸಪೇಟೆಯಲ್ಲಿ ಅಧಿಕಾರಿಗೆ ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚೌಹ್ಹಾಣ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಜಿಲ್ಲೆಗೆ ಸಚಿವರು ಬಂದು ಹೋಗಿ ಎರಡೇ ದಿನದಲ್ಲಿ ಪ್ರಾಣಿಬಲಿ ಕೊಟ್ಟು ಅಭಿಮಾನಿಗಳು ವಿಕೃತಿ ಮೆರೆದಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಪ್ರಮುಖ ಆರೋಪಿಗಳು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಎಫ್‌ಐಆರ್ ದಾಖಲಾಗುತ್ತಿದ್ದಂತೆ ಕೋಣ ಕಡಿದ ವ್ಯಕ್ತಿ ಸೇರಿ ಪ್ರಮುಖ ಆರೋಪಿಗಳೆಲ್ಲ ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಪ್ರಾಣಿಬಲಿ ನಿಷೇಧ ಕಾಯ್ದೆ ಉಲ್ಲಂಘನೆ ಮತ್ತು ಕೊರೋನಾ ನಿಯಮಗಳ ಉಲ್ಲಂಘನೆಯ ಅಡಿ ಪ್ರಕರಣ ದಾಖಲಾಗಿದೆ. ನಿನ್ನೆಯೇ ಕೂಡ್ಲಿಗಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸುದೀಪ್ ಅಸಮಾಧಾನ
ಅಭಿಮಾನಿಗಳು ಪ್ರಾಣಿ ಬಲಿ ನೀಡಿದ್ದನ್ನು ನಟ ಸುದೀಪ ಕೂಡ ಖಂಡಿಸಿದರು. ನಿನ್ನೆ ವರ್ಚುವಲ್ ಸಂದರ್ಶನದಲ್ಲಿ ಮಾತನಾಡುವಾಗ ಅಭಿಮಾನಿಗಳ ಅತಿರೇಕದ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ರೀತಿ ನಿಮ್ಮ ಅಭಿಮಾನವನ್ನು ವ್ಯಕ್ತಪಡಿಸಬೇಡಿ ಎಂದು ಬುದ್ಧಿಮಾತ ಹೇಳಿದ್ದಾರೆ.
ಈ ಘಟನೆ ಹೊಸದೇನಲ್ಲ
‘ದಿ ವಿಲನ್’ ಚಿತ್ರ ಯಶಸ್ವಿಯಾಗಲಿ ಎಂಬ ಕಾರಣಕ್ಕೆ ದಾವಣಗೆರೆಯಲ್ಲಿ ಕೋಣ ಮತ್ತು ಕುರಿಯೊಂದನ್ನು ಬಲಿ ನೀಡಿ ರಕ್ತವನ್ನು ಚಿತ್ರದ ಪೋಸ್ಟರ್‌ಗೆ ಅರ್ಪಣೆ ಮಾಡಿರುವ ಘಟನೆ ಸಹ ಹಿಂದೆ ನಡೆದಿತ್ತು.