ಆರ್ಡರ್ ಲೇಟ್ ಮಾಡಿದನೆಂಬ ಕಾರಣಕ್ಕೆ ಹೋಟೆಲ್ ನಲ್ಲಿ ಜಗಳಕ್ಕಿಳಿದ ಡೆಲಿವರಿ ಬಾಯ್ | ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಹೋಟೆಲ್ ಓನರ್ ನ ಹಣೆಗೆ ಬಿದ್ದಿತ್ತು ಬುಲ್ಲೆಟ್ !

ಆರ್ಡರ್ ನೀಡುವುದು ಕೊಂಚ ತಡವಾಯಿತೆಂಬ ಕಾರಣಕ್ಕೆ ಹೋಟೆಲ್ ಮಾಲೀಕನನ್ನೇ ದಾರುಣವಾಗಿ ಕೊಲೆಗೈದ ಪ್ರಕರಣ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು,ಮೃತ ವ್ಯಕ್ತಿಯನ್ನು ಸುನಿಲ್ ಅಗರ್ವಾಲ್ ಎಂದು ಗುರುತಿಸಲಾಗಿದ್ದು,ಕೊಲೆ ನಡೆಸಿದ ಆರೋಪಿ ಸ್ವಿಗ್ಗಿ ಡೆಲಿವರಿ ಬಾಯ್ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

 

ಘಟನೆ ವಿವರ: ದೆಹಲಿಯ ಗ್ರೇಟರ್ ನೋಯ್ಡಾದ ಮಿತ್ರ ಸೊಸೈಟಿ ಯಲ್ಲಿ ಜಾಮ್ ಜಾಮ್ ಎಂಬ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದರು.ಅಲ್ಲಿಗೆ ಬುಧವಾರ ಬೆಳಿಗ್ಗೆ ಆರೋಪಿ ಬಂದಿದ್ದು,ಚಿಕನ್ ಬಿರಿಯಾನಿ ಮತ್ತು ಪುರಿ ಸಬ್ಬಿ ಆರ್ಡರ್ ನೀಡಿದ್ದ ಎನ್ನಲಾಗಿದೆ. ಆ ಸಂದರ್ಭ ಬಿರಿಯಾನಿ ಸಿದ್ಧವಾಗಿದ್ದು, ಪೂರಿ ಸಬ್ಬಿ ನೀಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಅಲ್ಲಿವರೆಗೂ ಕಾಯಿರಿ ಎಂದು ರೆಸ್ಟೋರೆಂಟ್ ಕೆಲಸಗಾರ ಹೇಳಿದ್ದಾನೆ.

ಇದರಿಂದ ಕೋಪಗೊಂಡ ಡೆಲಿವರಿ ಬಾಯ್ ಕೆಲಸಗಾರನೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾನೆ. ಆರ್ಡರ್ ನನಗೆ ಈಗಲೇ ಬೇಕು ಎಂದು ಹಠ ಹಿಡಿದು ಗಲಾಟೆ ಮಾಡಿದ್ದಲ್ಲದೇ, ಕೆಲಸಗಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುತ್ತಿರುವಾಗ, ಜಗಳ ಬಿಡಿಸಲು ಹೋಟೆಲ್ ಮಾಲೀಕ ಸುನಿಲ್ ಮಧ್ಯಪ್ರವೇಶಿಸಿದ್ದಾರೆ. ಕೂಡಲೇ ತನ್ನ ಬಳಿ ಇದ್ದ ಗನ್ ನಿಂದ ಸುನಿಲ್ ಅವರ ತಲೆಗೆ ಗುಂಡು ಹಾರಿಸಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿದ್ದ ಸುನಿಲ್ ಅವರನ್ನು ಯಥಾರ್ಥ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಸುನಿಲ್ ಪ್ರಾಣಪಕ್ಷಿ ಹಾರಿಹೋಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Leave A Reply

Your email address will not be published.