ಅಂದು ಆ ದೇಶದ ಕ್ಯಾಬಿನೆಟ್ ಮಂತ್ರಿ, ಎರಡೇ ವರ್ಷದಲ್ಲಿ ಆತ ಮತ್ತೊಂದು ದೇಶದಲ್ಲಿ ಸೈಕಲ್ ಮೂಲಕ ಪಿಜ್ಜಾ ಮಾರುವ ಹುಡುಗ !!
ಜರ್ಮನಿ: ತೀರ ಇತ್ತೀಚೆಗೆ ದೇಶವೊಂದರ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದ ವ್ಯಕ್ತಿ ಕೇವಲ ಎರಡು ವರ್ಷಗಳ ನಂತರ ರಸ್ತೆಗಳಲ್ಲಿ ಸೈಕಲ್ ತುಳಿಯುತ್ತಾ ಪಿಜ್ಜಾ ಡೆಲಿವರಿ ಮಾಡುತ್ತಿದ್ದಾರೆ.
ಹೌದು, ಇದು ಅಫ್ಘಾನಿಸ್ತಾನದ ಸ್ಥಿತಿ. ಅಫ್ಘಾನಿಸ್ತಾನದ ಸಂವಹನ ಮತ್ತು ತಂತ್ರಜ್ಞಾನದ ಮಾಜಿ ಸಚಿವರಾಗಿದ್ದ ಸಯ್ಯದ್ ಅಮೀದ್ ಸಾದತ್ ಈಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಅಂತರ್ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಅಫ್ಘಾನಿಸ್ತಾನದಲ್ಲಿ 2018 ರಲ್ಲಿ ರಚನೆಯಾದ ಅಬ್ದುಲ್ ಘನಿ ನೇತೃತ್ವದ ಸರಕಾರದಲ್ಲಿ ಈ ವ್ಯಕ್ತಿ ಮಂತ್ರಿಯಾಗಿದ್ದರು. ನಂತರ ತಾಲಿಬಾನಿಗಳ ಹಿಡಿತಕ್ಕೆ ಬರುವ ಮುಂಚೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ 2020ರಲ್ಲಿ ಅಫ್ಘಾನ್ನಿಂದ ಹೊರಬಂದಿದ್ದರು. ಮುಖ್ಯಮಂತ್ರಿಯೊಂದಿಗೆ ಇದ್ದಾಗ ಬಿನ್ನಾಭಿಪ್ರಾಯ ಮತ್ತು ತಾಲಿಬಾನಿ ಗಳ ಬಗ್ಗೆ ವಿಭಿನ್ನ ನಿಲುವು ಹೊಂದಿದ್ದ ಇವರು ದೇಶ ತ್ಯಜಿಸಿ ಜರ್ಮನಿಗೆ ಕುಟುಂಬ ಸಮೇತ ಸಾಗಿದ್ದರು.
ಇಂಜಿನಿಯರಿಂಗ್ ನಲ್ಲಿ ಎರಡೆರಡು ಸ್ನಾತಕೋತ್ತರ ಪದವಿ ಪಡೆದಿದ್ದ ಸಾದತ್ ಹಿಂದೆ ಸೌದಿ ಅರೇಬಿಯಾದಲ್ಲಿ ಟೆಲಿಕಾಂ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಆದರೆ 2020ರಲ್ಲಿ ಜರ್ಮನಿಗೆ ಕಾಲಿಟ್ಟು ಕೆಲಸದ ಹುಡುಕಾಟ ಮಾಡಿದವರಿಗೆ ಸರಿಯಾದ ಕೆಲಸ ಸಿಕ್ಕಿಲ್ಲ. ಅಷ್ಟರಲ್ಲಿ ಜೇಬು ಬರಿದಾಗಿ ಹೋಗಿತ್ತು. ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಕೆಲಸ ಯಾವುದಾದರೇನು ಎಂದುಕೊಂಡು ತಕ್ಷಣ ಸಿಕ್ಕಿದ ಪಿಜ್ಜಾ ಡೆಲಿವರಿ ಬಾಯ್ ಕೆಲಸಕ್ಕೆ ಸೇರಿಕೊಂಡಿದ್ದಾರೆ ಈ ಮಾಜಿ ಮಂತ್ರಿಗಳು.
ಒಂದು ಕಾಲದ ಮಂತ್ರಿ ಇವತ್ತು ಸೈಕಲ್ ಮೇಲೆ ಪಿಜ್ಜಾ ಡಿಲಿವರಿ ಮಾಡುತ್ತಿದ್ದರು ಕೂಡಾ, ಮುಂದೊಂದು ದಿನ ಟೆಲಿಕಾಂ ಕಂಪನಿಗಳಲ್ಲಿ ಕೆಲಸ ಹುಡುಕಿ ಜರ್ಮನಿಯಲ್ಲಿ ಸೆಟಲ್ ಆಗುವ ಬಯಕೆ ಅವರದ್ದು. ಜರ್ಮನಿ ನೆಮ್ಮದಿಯಾಗಿ ಬದುಕಲು ಪ್ರಶಸ್ತ ಸ್ಥಳ ಎಂಬುದು ಅವರ ಅಭಿಪ್ರಾಯ.