ರಕ್ಷಾಬಂಧನ ದಿನ ಸಹೋದರಿಯರಿಂದ ಹಾವಿಗೆ ರಕ್ಷಾಬಂಧನ ಕಟ್ಟಿಸಲು ಹೋಗಿ, ತನ್ನ ಪ್ರಾಣವನ್ನೇ ಬಲಿಕೊಟ್ಟ ಸ್ನೇಕ್ ಮ್ಯಾನ್ !!
ಹಾವುಗಳೊಂದಿಗೆ ಸ್ನೇಹಿತನಂತಿದ್ದ ಸ್ನೇಕ್ ಮ್ಯಾನ್ ನ ಅತಿಯಾದ ಧೈರ್ಯವೇ ಇವನಿಗೆ ಮುಳುವಾಗಿ, ಆತನ ಪ್ರಾಣಪಕ್ಷಿ ಹಾರಿಹೋದ ಘಟನೆ ಬಿಹಾರದ ಸಾರಣ ಜಿಲ್ಲೆಯಲ್ಲಿ ನಡೆದಿದೆ.
25 ವರ್ಷದ ಮನಮೋಹನ್ ಉರ್ಫ್ ಬವುರಾ ಎಂಬುವವರು,ರಕ್ಷಾ ಬಂಧನದ ದಿನ ಹಾವಿಗೆ ತನ್ನ ಸಹೋದರಿಯರಿಂದ ರಕ್ಷೆ ಕಟ್ಟಲು ಹೋಗಿ ಹಾವು ಕಚ್ಚಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ವಿಷಕಾರಿ ಹಾವುಗಳನ್ನು ಹಿಡಿಯುತಿದ್ದ ಈತ,ಕಳೆದ 10 ವರ್ಷಗಳಿಂದ ಹಾವುಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದನು.ಇತರರಿಗೂ ಹಾವುಗಳನ್ನು ಕೊಲ್ಲದಂತೆ ಹೇಳುತ್ತಿದ್ದನು.
ರಕ್ಷಾ ಬಂಧನವಾಗಿದ್ದ ಭಾನುವಾರ ಎರಡು ನಾಗರಹಾವು ಹಿಡಿದಿದ್ದ ಮನಮೋಹನ್,ತನ್ನ ಸೋದರಿಯರಿಂದ ರಾಖಿ ಕಟ್ಟಿಸಲು ಮುಂದಾಗಿದ್ದ. ಇದಕ್ಕೆ ಸಹೋದರಿಯರು ಒಪ್ಪಿಕೊಂಡಿದ್ದು,ಈ ಸಂದರ್ಭದಲ್ಲಿ ಹಾವಿನ ಬಾಲ ಹಿಡಿದುಕೊಂಡಿದ್ದಾನೆ.
ಈ ವೇಳೆ ಒಂದು ಹಾವು ಮನಮೋಹನ್ ಕಾಲಿನ ಹೆಬ್ಬೆರಳನ್ನು ಕಚ್ಚಿದೆ.ಕೂಡಲೇ ಯವಕನಿಗೆ ಸ್ಥಳೀಯರು ಗಿಡಮೂಲಿಕೆ ಔಷಧಿ ಕೊಟ್ಟಿದ್ದಾರೆ. ಆದರೆ ಆರೋಗ್ಯ ಹದಗೆಟ್ಟ ಕಾರಣ,ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ಹಾವು ಕಚ್ಚಿದರೆ ಅಗತ್ಯವಾಗಿ ಬೇಕಿದ್ದ ಆಯಂಟಿವೆನಮ್ ಇಂಜೆಕ್ಷನ್ ಅಲ್ಲಿ ಇರದಿದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಆದರೆ ಅಷ್ಟರಲ್ಲಿಯೇ ಯುವಕಪ್ರಾಣ ಬಿಟ್ಟಿದ್ದಾನೆ.
ಯುವಕ ಮನಮೋಹನ್ ಸ್ಥಳೀಯವಾಗಿ ಸ್ನೇಕ್ ಬವುರಾ ಎಂದೇ ಪ್ರಸಿದ್ಧಿ ಪಡೆದಿದ್ದ. ಸುತ್ತಮುತ್ತದ ಗ್ರಾಮಗಳಲ್ಲಿ ಎಲ್ಲೇ ಹಾವು ಕಾಣಿಸಿಕೊಂಡರೂ ಈತನಿಗೇ ಕರೆ ಮಾಡುತಿದ್ದರು.ಆದರೆ ಈ ಬಾರಿ ಈತನ ಅದೃಷ್ಟ ಕೆಟ್ಟಿತ್ತು.
ಹಾವು ಕಚ್ಚಿದ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ಆತ ಬದುಕುತ್ತಿದ್ದ ಎಂದು ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.