ತಾಲಿಬಾನ್ ಉಗ್ರರಿಗೆ ಬಿಸಿ ಮುಟ್ಟಿಸಿದ ಪಂಜಶೀರ್ ಯೋಧರು | ತಮ್ಮ ಪ್ರಾಂತ್ಯದತ್ತ ನುಗ್ಗಿಬಂದ 300 ತಾಲಿಬಾನಿಗಳು ಮಟಾಷ್ !?
ತಾಲಿಬಾನಿಯರು ಅಫ್ಘಾನಿಸ್ತಾನವನ್ನು ಕಿಂಚಿತ್ತೂ ಕರುಣೆ ಇಲ್ಲದೆ ವಶಪಡಿಸಿಕೊಂಡಿದ್ದಾರೆ. ಆದರೆ ಪಂಜಶೀರ್ ಕಣಿವೆಯ ಬಂಡುಕೋರ ನಾಯಕ ಅಹಮ್ಮದ್ ಮಸೂದ್ ನೇತೃತ್ವದಲ್ಲಿ ಈ ಕಣಿವೆಯ ಪ್ರಜೆಗಳು ತಾಲಿಬಾನಿಗರಿಗೆ ಎದೆಯೊಡ್ಡಿ ನಿಂತಿದ್ದು, ಇದೀಗ ರಕ್ಕಸರಿಗೆ ಚಿಕ್ಕ ಕಣಿವೆ ಪಂಜಶೀರ್ ತಡೆಗೋಡೆಯಂತಾಗಿದೆ.
ಅಲ್-ಅರೇಬಿಯಾ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಮಸೂದ್, ಈ ಕಣಿವೆಯನ್ನು ನಿಮಗೆ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಅಫ್ಘಾನ್ ಅಧ್ಯಕ್ಷನಂತೆ ಓಡಿಹೋಗಲ್ಲ. ತಾಕತ್ತಿದ್ದರೆ ಯುದ್ಧಮಾಡಿ ಗೆಲ್ಲಿ ಎಂದು ಮಸೂದ್ ಖಡಕ್ ಸಂದೇಶ ರವಾನಿಸಿದ್ದರು.
ಇದೇ ರೀತಿ ಯಾವುದೇ ಕಾರಣಕ್ಕೂ ಪಂಜ್‌ಶೀರ್ ಕಣಿವೆಯನ್ನು ತಾಲಿಬಾನಿಗಳಿಗೆ ಬಿಟ್ಟುಕೊಡಲ್ಲ, ಅವರ ಮುಂದೆ ತಲೆಬಾಗಲ್ಲ ಎಂದು ಘಂಟಾಘೋಷವಾಗಿ ಘರ್ಜಿಸಿದ್ದ ಪಂಜ್‌ಶೀರ್ ಯೋಧರು, ಅದನ್ನು ಸಾಧಿಸಿ ತೋರಿಸಿದ್ದಾರೆ. ತಮ್ಮ ಕಣಿವೆಯತ್ತ ಧಾವಿಸಿ ಬಂದಿರುವ ಸುಮಾರು 300 ತಾಲಿಬಾನಿಗಳನ್ನು ಹೊಡೆದುರುಳಿಸಿದ್ದಾರೆ.
ತಾಲಿಬಾನ್ ಖರಿ ಫಸೀಹುದ್ ದಿನ್ ಹಫೀಜುಲ್ಲಾ ನೇತೃತ್ವದ ಹಲವಾರು ಹೋರಾಟಗಾರರನ್ನು ಪಂಜ್ ಶೀರ್ ಮೇಲೆ ದಾಳಿ ನಡೆಸಲು ಕಳುಹಿಸಿತ್ತು. ಆದರೆ ಬಾಗ್ಲಾನ್ ಪ್ರಾಂತ್ಯದ ಅಂಡರಾ ಕಣಿವೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ಪಂಜ್‌ಶೀರ್ ಯೋಧರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 300 ತಾಲಿಬಾನಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪಂಜಶೀರ್ ಕಣಿವೆಯ ಬಂಡುಕೋರ ನಾಯಕ ಅಹಮ್ಮದ್ ಮಸೂದ್, ನಾವು ಯುದ್ಧ ಮಾಡಲ್ಲ. ಆದ್ರೆ ಆಕ್ರಮಣಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ. ಯಒಂದು ವೇಳೆ ತಾಲಿಬಾನಿಗಳ ವರ್ತನೆ ಅತಿರೇಕಕ್ಕೆ ತಲುಪಿದರೆ ಯುದ್ಧವೇ ನಡೆಯಲ್ಲ ಎಂದು ಹೇಳಲಾರೆ. ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ತಾಲಿಬಾನಿಗಳ ಮಾತುಕತೆ ಅವಶ್ಯಕವಾಗಿದೆ. ತಾಲಿಬಾನಿಗಳು ಮಾತುಕತೆಗೆ ಒಪ್ಪದಿದ್ದರೆ ಯುದ್ಧ ನಮ್ಮ ಮುಂದಿನ ಆಯ್ಕೆ ಆಗಬಹುದು ಎಂದು ಎಚ್ಚರಿಕೆ ನೀಡಿದ್ದರು.
ಇದರ ಹೊರತಾಗಿಯೂ ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ಸೇರಿದಂತೆ ಎಲ್ಲವನ್ನೂ ವಶಕ್ಕೆ ಪಡೆದುಕೊಂಡು ಬೀಗುತ್ತಿದ್ದ ತಾಲಿಬಾನಿಗಳು ಪಂಜ್‌ಶೀರ್‌ನತ್ತ ದೌಡಾಯಿಸಿದ್ದರು. ಇದೀಗ ತಾಲಿಬಾನಿಗಳನ್ನು ಹೊಡೆದುರುಳಿಸಲಾಗಿದೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ಸೋವಿಯತ್ ವಿರೋಧಿ ಹೋರಾಟದ ನಾಯಕ, ಮುಜಾಹಿದ್ದೀನ್ ಕಮಾಂಡರ್ ಆಗಿದ್ದ ಅಹಮ್ಮದ್ ಷಾ ಮಸೂದ್ ಅವರ ಪುತ್ರನೇ ಅಹಮ್ಮದ್ ಮಸೂದ್. ಅಫ್ಘಾನಿಸ್ತಾನದ ಇತಿಹಾಸದಲ್ಲಿ ದಂತಕತೆ ಎನಿಸಿದ್ದ ಮುಜಾಹಿದ್ದೀನ್ ಕಮಾಂಡರ್ ಅಹಮ್ಮದ್ ಷಾ ಅವರನ್ನು ಸೆಪ್ಟೆಂಬರ್ 11, 2001ರ ದಾಳಿಗೆ ಮೊದಲು ಅಲ್‌ಖೈದಾ ಉಗ್ರರು ಹತ್ಯೆ ಮಾಡಿದ್ದರು.
ಈಗ ಅವರ ಮಗ ಅಹಮ್ಮದ್ ಮಸೂದ್ ತಾಲಿಬಾನಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಇದಾಗಲೇ ಅವರು 9 ಸಾವಿರ ಹೋರಾಟಗಾರರನ್ನು ಸಂಘಟಿಸಿದ್ದು, ತಾಲಿಬಾನ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸರ್ಕಾರಿ ಪಡೆಗಳು ಇತರ ಬುಡಕಟ್ಟುಗಳ ಹೋರಾಟಗಾರರು ಈ ಪ್ರದೇಶದಲ್ಲಿ ಹೆಚ್ಚಾಗಿದ್ದಾರೆ. ಎಲ್ಲರೂ ದೇಶಕ್ಕಾಗಿ ಹೋರಾಡುತ್ತೇವೆ ಎಂಬ ಒಗ್ಗಟ್ಟಿನಲ್ಲಿ ಈ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ.