ರೈತನಿಂದಲೇ ಹಣ ದೋಚಿದ ಖದೀಮರು | ಕಂಗಾಲಾಗಿ ತಲೆ ಮೇಲೆ ಕೈ ಹೊತ್ತು ಕುಳಿತ ರೈತ !!
ರೈತರು ದೇಶದ ಬೆನ್ನೆಲುಬು.ಅವರ ಕೈ ಯಾವಾಗಲೂ ದುಡಿದು ತಿನ್ನೋ ಅನ್ನದ ಮೇಲಿರುತ್ತೋ ಹೊರತು ಇತರರ ದುಡಿಮೆಯಿಂದಲ್ಲ. ಅಂತಹ ಸ್ವಾಭಿಮಾನಿಗಳಿಂದ ಅವರ ದುಡಿಮೆಯ ಹಣವನ್ನೇ ಕಳ್ಳತನ ಮಾಡಿರುವ ಘಟನೆ ಗದಗ -ಬೆಟಗೇರಿ ಅವಳಿ ಪ್ರದೇಶದಲ್ಲಿ ನಡೆದಿದೆ.
ಹೌದು, ಈ ಬಾರಿಯಂತೂ ಅತಿಯಾದ ಮಳೆಯ ನಡುವೆ ರೈತರು ಹಲವು ಕಷ್ಟಗಳನ್ನು ಅನುಭವಿಸಿ ಬೆಲೆ ಬೆಳೆದಿದ್ದರು. ಅವರ ದುಡಿಮೆಯ ಹಣದಿಂದಲೇ ಜೀವನ ಸಾಗಿಸುತಿದ್ದ ರೈತರ ಕಿಸೆಗೆ ಕಿಡಿಗೇಡಿಗಳು ಕಣ್ಣು ಹಾಕುತ್ತಿರುವುದು ಬೇಸರ ತಂದಿದೆ.
ಒಂದೇ ದಿನ ಗದಗ -ಬೆಟಗೇರಿ ಅವಳಿ ನಗರದಲ್ಲಿ ಶನಿವಾರ ಮೂವರು ರೈತರು ಹಣ ಕಳೆದುಕೊಂಡಿದ್ದಾರೆ. ಅದರಲ್ಲಿ ಗದಗ ಎಪಿಎಂಸಿಯಲ್ಲಿ ಹೆಸರು ಮಾರಾಟ ಮಾಡಿ, ಹಣ ತೆಗೆದುಕೊಂಡು ಹೊರಟಿದ್ದ ವೇಳೆ ಕಳ್ಳತನಕ್ಕೆ ಒಳಗಾದ ಕೊಪ್ಪಳ ಜಿಲ್ಲೆಯ ರೈತ ಮಾತ್ರ ದೂರು ದಾಖಲಿಸಿದ್ದಾರೆ.
ಕೊಪ್ಪಳ ಜಿಲ್ಲೆ ಕವಲೂರ ಗ್ರಾಮದ ರೈತ ಕೊಟ್ರಪ್ಪ ರುದ್ರಪ್ಪ ನಿಟ್ಟಾಲಿ ಅವರು ಹೆಸರುಕಾಳು ಮಾರಿ ಪಡೆದ 44 ಸಾವಿರ ರೂ. ಕಳೆದುಕೊಂಡಿದ್ದಾರೆ. ರೈತ ಕೊಟ್ರಪ್ಪ ಅವರು ಆಗಸ್ಟ್ 18ರಂದು ಗದಗ ಎಪಿಎಂಸಿಗೆ ಬಂದು ಮಾರಾಟ ಮಾಡಿದ್ದು,ಒಟ್ಟು 44,570 ರೂ. ತೆಗೆದುಕೊಂಡು ಗದಗ ಹೊಸ ಬಸ್ ನಿಲ್ದಾಣಕ್ಕೆ ಬಂದಿದ್ದರು.
ಈ ವೇಳೆ ಬಸ್ ನಿಲ್ದಾಣದಲ್ಲಿ ಕೊಪ್ಪಳ ಬಸ್ ಹತ್ತುವಾಗ ನೂಕುನುಗ್ಗಲು ಉಂಟಾಗಿದ್ದು,ಆದರೂ ಹರಸಾಹಸ ಪಟ್ಟು ರೈತ ಕೊಟ್ರಪ್ಪ ಸೀಟು ಹಿಡಿದು ಕುಳಿತಿದ್ದರು.ಈ ಸಂದರ್ಭದಲ್ಲಿ ಅನುಮಾನಗೊಂಡ ಇವರು ಜೇಬು ಪರೀಕ್ಷಿಸಿದ್ದು,ಕತ್ತರಿ ಹಾಕಿ ಹಣ ಲಪಟಾಯಿಸಿದ್ದು ಗಮನಕ್ಕೆ ಬಂದಿದೆ.
ತಕ್ಷಣ ಬಸ್ನಿಂದ ಇಳಿದು ಹುಡುಕಾಡಿದ ರೈತ,ಅಕ್ಕಪಕ್ಕದವರನ್ನು ವಿಚಾರಿಸಿದ್ದಾರೆ. ಬಳಿಕ ದಿಕ್ಕು ತೋಚದ ರೈತ, ಕುಟುಂಬದ ಸದಸ್ಯರನ್ನು ಕರೆಸಿ ಬೆಟಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಷ್ಟೇ ಅಲ್ಲದೆ,ಮುಂಡರಗಿ ಮತ್ತು ಗಜೇಂದ್ರಗಡ ತಾಲೂಕಿನ ಇಬ್ಬರು ರೈತರೂ ಸಹ ಒಟ್ಟು 13.5 ಸಾವಿರ ರೂ. ಕಳೆದುಕೊಂಡಿದ್ದಾರೆ. ಆದರೆ ಕಳ್ಳರ ಕೈಚಳಕದಿಂದ ಹಣ ಕಳೆದುಕೊಂಡಿದ್ದೋ ಅಥವಾ ಬೇಜವಾಬ್ದಾರಿಯಿಂದ ಕಳೆದುಕೊಂಡಿದ್ದೋ ಎನ್ನುವ ಗೊಂದಲದಿಂದ ಅವರು ಪೊಲೀಸರಿಗೆ ದೂರು ಕೊಟ್ಟಿಲ್ಲ. ಆದರೆ ಕಳೆದುಕೊಂಡ ಹಣ ಮಾತ್ರ ಬೆಳೆ ಮಾರಿದ್ದು ಎನ್ನುತ್ತಾರೆ ರೈತರು.
ಎಪಿಎಂಸಿಗೆ ಆಗಮಿಸುವ ರೈತರು ಸಾಧ್ಯವಾದಷ್ಟು ಚೆಕ್ ಮೂಲಕ ಇಲ್ಲವೇ ಆನ್ಲೈನ್ ಮೂಲಕ ಹಣದ ವ್ಯವಹಾರ ನಡೆಸುವುದು ಒಳಿತು. ಇದರಿಂದ ಕಳ್ಳತನಕ್ಕೆ ಅವಕಾಶ ಸಿಗುವುದಿಲ್ಲ. ಜತೆಗೆ ಹಣ ತೆಗೆದುಕೊಂಡು ಹೋಗುವಾಗ ಗರಿಷ್ಠ ಮಟ್ಟದ ಎಚ್ಚರಿಕೆ ವಹಿಸುವುದು ಬಿಟ್ಟು ಬೇರೆ ದಾರಿ ಇಲ್ಲ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಗದಗದಲ್ಲಿ ಕಳ್ಳರ ಸಂಖ್ಯೆ ಅತಿಯಾಗಿದ್ದು, ಈ ಹಿಂದೆ ಉತ್ತರ ಕನ್ನಡ ಜಿಲ್ಲೆ ಕುಮಟಾದ ಸೌಮ್ಯ ಸತೀಶ ಎಂಬುವವರು ಗದಗನಲ್ಲಿರುವ ತಮ್ಮ ಅಕ್ಕನ ಮನೆಗೆ ಭೇಟಿ ನೀಡಿ ವಾಪಸ್ ಹೋಗುವಾಗ ಹೊಸ ಬಸ್ ನಿಲ್ದಾಣದಲ್ಲೇ 3.15 ಲಕ್ಷ ರೂ. ಬಂಗಾರ ಕಳ್ಳತನ ಆಗಿದೆ ಎಂದು ತಿಳಿಸಿದ್ದು,ಈ ಕುರಿತು ಬೆಟಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಷ್ಟೇ ಅಲ್ಲದೆ ಹಿಂದಿನ ವರ್ಷಗಳಲ್ಲಿ ಈರುಳ್ಳಿ ಮತ್ತು ಮೆಣಸಿನಕಾಯಿಗೆ ಬಂಗಾರದ ಬೆಲೆ ಬಂದ ಕಾರಣ, ಕಳ್ಳರು ರಾತ್ರಿ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ಕಳ್ಳತನ ಮಾಡುತ್ತಿದ್ದರು. ಕಳ್ಳರ ಹಾವಳಿಯಿಂದ ಬೇಸತ್ತ ಜಿಲ್ಲೆಯ ರೈತರು ರಾತ್ರಿ ವೇಳೆ ಲಾಠಿ ಹಿಡಿದು ಬೆಳೆ ಕಾಯುವಂತಾಗಿತ್ತು. ಸದ್ಯ ಬೆಳೆ ಮಾರಿದ ಹಣದ ಮೇಲೆ ಕಳ್ಳರ ದೃಷ್ಟಿ ಬಿದ್ದಿದ್ದು, ರೈತರ ಕಳ್ಳರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.