ಮಾಜಿ ಸಚಿವ ಎಚ್.ವೈ.ಮೇಟಿ ಲೈಂಗಿಕ ಹಗರಣದ ಸಂತ್ರಸ್ತೆ ಮತ್ತೊಮ್ಮೆ ಸುದ್ದಿಯಲ್ಲಿ | ಈಗ ಆರೋಪ ಮಾಡಿರುವುದು ಶಾಸಕ ವೀರಣ್ಣ ಚರಂತಿಮಠ ವಿರುದ್ಧ | ಏನಿದು ಪ್ರಕರಣ ?
2019ರಲ್ಲಿ ಭಾರಿ ಸದ್ದು ಮಾಡಿದ್ದ ಮಾಜಿ ಸಚಿವ ಎಚ್.ವೈ. ಮೇಟಿ ಅವರ ಲೈಂಗಿಕ ಹಗರಣದಲ್ಲಿ ಸಂತ್ರಸ್ತೆಯಾಗಿದ್ದ ವಿಜಯಲಕ್ಷ್ಮಿ ಸರೂರ ಅವರು ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಜಿಲ್ಲಾ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿರುವ ವಿಜಯಲಕ್ಷ್ಮಿ ಅವರು ಬಾಗಲಕೋಟೆ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಆರೋಪ ಮಾಡಿದ್ದಾರೆ.
ಈ ಹಿಂದೆ ನನ್ನ ವಿರುದ್ಧ ಕೊಲೆ ಯತ್ನ ಕೂಡ ನಡೆದಿತ್ತು. ಚರಂತಿಮಠ ಅವರು ನನ್ನ ಬೆನ್ನು ಬಿದ್ದಿದ್ದಾರೆ. ನನ್ನನ್ನು ಕೆಲಸದಿಂದ ವಜಾ ಮಾಡುವ ಹುನ್ನಾರ ನಡೆದಿದೆ, ನನಗೆ ಈ ಬೆಳವಣಿಗೆಗಳಿಂದ ಸಾಕಾಗಿ ಹೋಗಿದೆ.
ನನ್ನನ್ನು ಬಾಗಲಕೋಟೆ ಆಯುಷ್ ಆಸ್ಪತ್ರೆಯಿಂದ ಹುನಗುಂದ ಪಟ್ಟಣಕ್ಕೆ ನಿಯೋಜನೆ ಮಾಡಿದ್ದಾರೆ. ನಂತರ ನನ್ನನ್ನು ವಜಾ ಮಾಡುವ ಪ್ರಯತ್ನವೂ ಇದೆ ಎಂದಿರುವ ವಿಜಯಲಕ್ಷ್ಮಿ, ನನ್ನ ನಿಯೋಜನೆ ಆದೇಶ ಹಿಂಪಡೆಯಬೇಕು.ನನ್ನ ಕೆಲಸಕ್ಕೆ ಧಕ್ಕೆ ತರಬಾರದು ಎಂದಿದ್ದಾರೆ. ಒಂದು ವೇಳೆ ನಿಯೋಜನೆ ಹಿಂಪಡೆಯದಿದ್ದರೆ ಶಾಸಕ ವೀರಣ್ಣ ಚರಂತಿಮಠ ಮನೆ ಮುಂದೆ ಧರಣಿ ಮಾಡುತ್ತೇನೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ.
ಬಾಗಲಕೋಟೆ ಆಯುಷ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ಅಟೆಂಡರ್ ಆಗಿರುವ ವಿಜಯಲಕ್ಷ್ಮಿ ಸರೂರ ಅವರನ್ನು ಸದ್ಯ ಹುನಗುಂದ ಆಯುಷ್ ಆಸ್ಪತ್ರೆಗೆ ನಿಯೋಜನೆ ಮಾಡಲಾಗಿದೆ.
ನಾನು ಆಸ್ಪತ್ರೆಯಲ್ಲಿ ಇದ್ದರೆ ರೋಗಿಗಳು ಇಲ್ಲಿಗೆ ಬರುವುದಿಲ್ಲ ಎಂಬ ಕಾರಣವನ್ನು ಚರಂತಿಮಠ ಅವರು ನೀಡಿದ್ದಾರೆ. ಯಾವ ರೋಗಿ ಅವರ ಬಳಿ ಹೋಗಿ ಈ ಮಾತನ್ನು ಹೇಳಿದ್ದಾನೋ ಗೊತ್ತಿಲ್ಲ. ಸುಖಾಸುಮ್ಮನೆ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಈ ಹಿಂದೆ ಕೊಲೆ ಯತ್ನ ನಡೆದಾಗ ಬದುಕಿ ಬಂದಿದ್ದೇನೆ. ಈಗ ಮತ್ತೆ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.