ಮೂಡುಬಿದಿರೆ | ಪತ್ನಿಯನ್ನು ‘ಬಲಾಯಿ’ಯಿಂದ ಹೊಡೆದು ಕೊಲೆ ಮಾಡಿದ ಪತಿ

ಪತಿಯು ಪತ್ನಿಯನ್ನು ಬಲಾಯಿಯಿಂದ ಹೊಡೆದು ಕೊಲೆ ಮಾಡಿದ ಘಟನೆ ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

 

ಸುನಿತಾ (30) ಕೊಲೆಗೀಡಾದ ಮಹಿಳೆ. ದಿನ್ ರಾಜ್ ಕೊಲೆಮಾಡಿದ ಪಾಪಿ ಪತಿ.

ಪತಿ-ಪತ್ನಿ

ನಿನ್ನೆ ಸಂಜೆ ಪತಿ-ಪತ್ನಿ ಮಧ್ಯೆ ಯಾವುದೋ ಕಾರಣಕ್ಕೆ ಜಗಳ ನಡೆದಿದ್ದು, ಈ ಸಂದರ್ಭ ದಿನ್ ರಾಜ್ ಬಲಾಯಿಯಿಂದ ಹೆಂಡತಿಯ ತಲೆಗೆ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ರಕ್ತ ಸೋರುತ್ತಿರುವುದನ್ನು ಕಂಡು ಹೆದರಿದ ದಿನ್ ರಾಜ್, ಸುನೀತಾ ಅವರ ಸಹೋದರ ಸಂಬಂಧಿಗೆ ಕರೆ ಮಾಡಿದ್ದಾನೆ. ಆಗ ಅವರು ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದಾರೆ.

ಮೊದಲಿಗೆ ಬೆಳುವಾಯಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದಾಗ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು . ಆದರೆ ಅಧಿಕ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದ ಸುನೀತಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಬಡ ಕುಟುಂಬದ ಸುನೀತಾ ತನ್ನ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಒಂದೂವರೆ ವರ್ಷಗಳ ಹಿಂದೆ ಸಂಬಂಧಿಕರು ಸೇರಿ ಆಕೆಗೆ ಮದುವೆ ಮಾಡಿಸಿದ್ದರು. ತಾಯಿ ಒಬ್ಬಳೇ ಮನೆಯಲ್ಲಿ ಇದ್ದುದರಿಂದ ಸುನೀತಾ ಅಲ್ಲಿಯೇ ಉಳಿದುಕೊಂಡಿದ್ದು, ದಿನ್ ರಾಜ್ ಕೂಡಾ ಅಲ್ಲಿಯೇ ಇದ್ದು ಮೂಡುಬಿದಿರೆಯಲ್ಲಿ ಬ್ಯಾಟರಿ ಅಂಗಡಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದ ಎನ್ನಲಾಗಿದೆ. ನಿನ್ನೆ ಸುನೀತಾ ಅವರ ತಾಯಿ ಪಕ್ಕದ ಮನೆಗೆ ಹೋದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ದಿನ್ ರಾಜ್ ನನ್ನು ಇಂದು ಬೆಳಿಗ್ಗೆ ಮೂಡುಬಿದಿರೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.