ಮಂಗಳೂರು | 10 ವರ್ಷಗಳ ಹಿಂದೆ ನಡೆದಿದ್ದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ | ತಲೆಮರೆಸಿಕೊಂಡಿದ್ದ ಆರೋಪಿ ಬೆಳ್ತಂಗಡಿಯಲ್ಲಿ ಅರೆಸ್ಟ್ !

ಮಂಗಳೂರು: ಮುಚ್ಚೂರು ನೀರುಡೆಯ ಅಪ್ರಾಪ್ತ ಬಾಲಕಿಯ ಮೇಲೆ ಹತ್ತು ವರ್ಷದ ಮೊದಲು ನಡೆದ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಮಂಗಳವಾರ ಬಂಧಿಸುವಲ್ಲಿ ಬಜ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ.

 

ಬಂಧಿತ ಆರೋಪಿ ಮನೋಜ್ ಬಿ. ಶೆಟ್ಟಿ, ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆ ಮೇಲಂತಬೆಟ್ಟು ನಿವಾಸಿ ಎಂದು ತಿಳಿದುಬಂದಿದೆ.

2011ರ ಜೂನ್ 24ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚೂರು ನೀರುಡೆಯ 7ನೇ ತರಗತಿಯ ವಿದ್ಯಾರ್ಥಿನಿ ನಗರದ ಶಾಲೆಗೆ ತೆರಳುತ್ತಿದ್ದಳು. ಈ ವೇಳೆ ಆರೋಪಿ ಮನೋಜ್ ಶೆಟ್ಟಿ ಮತ್ತು ಆತನ ಸ್ನೇಹಿತ ದಿನೇಶ್ ಅಮೀನ್ ಎಂಬವರು ಬಾಲಕಿಯನ್ನು ಪುಸಲಾಯಿಸಿ ಆಟೋ ರಿಕ್ಷಾದಲ್ಲಿ ಮನೆಗೆ ಕರೆದೊಯ್ದಿದ್ದರು. ಬೆಳಗ್ಗೆ 10 ಗಂಟೆಯ ಸುಮಾರಿಗೆ ಆರೋಪಿಗಳು ಬಾಲಕಿಯ ಅತ್ಯಾಚಾರಗೈದಿದ್ದಾರೆ. ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಮಂಗಳೂರು ಉತ್ತರ ಉಪ ವಿಭಾಗದ ಈ ಹಿಂದಿನ ಎಸಿಪಿ ಪುಟ್ಟ ಮಾದಯ್ಯ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನಂತರ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಪಡೆದ ಆರೋಪಿ ಮನೋಜ್ ಬಿ. ಶೆಟ್ಟಿ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಬಳಿಕ ವಿಚಾರಣೆ ನಡೆಸಿದ ನ್ಯಾಯಾಲಯವು 2ನೇ ಆರೋಪಿ ದಿನೇಶ್ ಅಮೀನ್ ಎಂಬಾತನಿಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿತ್ತು.

ಪ್ರಮುಖ ಆರೋಪಿ ಮನೋಜ್ ಬಿ. ಶೆಟ್ಟಿ ಎಂಬಾತನು ವಿಚಾರಣೆಗೆ ಹಾಜರಾಗದೆ ಇರುವುದರಿಂದ ಆತನ ವಿರುದ್ಧ ‘ಎಲ್‌ಪಿಸಿ’ ವಾರೆಂಟ್ ಹೊರಡಿಸಲಾಗಿತ್ತು.

ಆದರೆ ಆರೋಪಿ ಮನೋಜ್ ಶೆಟ್ಟಿ ತನ್ನ ಗುರುತು ಸಿಗಬಾರದೆಂದು, ಸುಮಾರು 10 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆ ಮತ್ತು ಮೇಲಂತಬೆಟ್ಟು ಎಂಬಲ್ಲಿ ತನ್ನ ಹೆಸರು ಮೋಹನ್ ಎಂಬುದಾಗಿ ಬದಲಾಯಿಸಿಕೊಂಡು ವಾಸಿಸುತ್ತಿದ್ದ.

ಆದರೆ ಪೊಲೀಸರ ಸತತ ತನಿಖೆಯಿಂದ, ಆರೋಪಿಯ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಬಜ್ಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಆರೋಪಿಯನ್ನು ಬಂಧಿಸಿದ್ದಾರೆ.

ಬಜ್ಪೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಪಿಎಸ್‌ಐ ಪೂವಪ್ಪ ಹಾಗೂ ಅಪರಾಧ ಪತ್ತೆ ವಿಭಾಗದ ಎಎಸ್‌ಐ ರಾಮ ಪೂಜಾರಿ, ಸಿಬ್ಬಂದಿ ರಶೀದ್ ಶೇಖ್, ಸಿದ್ದಲಿಂಗಯ್ಯ ಹಿರೇಮಠ ಭಾಗವಹಿಸಿದ್ದರು.

Leave A Reply

Your email address will not be published.