ಕಸ ಆಯುವ ಮಹಿಳೆಯ ಇಂಗ್ಲಿಷ್ ಕೇಳಿ ಫೀದಾ ಆದ ಯುವಜನತೆ | ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆದ ವಿಡಿಯೋ
ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ. ಅಂತಹದರಲ್ಲಿ ಇಂದಿನ ಯುವ ಪೀಳಿಗೆ ಉತ್ಸಾಹ ಕಳೆದುಕೊಂಡು ತಮ್ಮ ಸಾಮರ್ಥ್ಯವನ್ನೇ ಮರೆತಿರುವುದು ಕಂಡುಬರುತ್ತಿದೆ. ಆದರೆ ಇಂದು ಅದೇ ಯುವ ಜನತೆ, ಕಸ ಆಯುವ ಮಹಿಳೆಯೊಬ್ಬರು ತನ್ನ ದಿಟ್ಟತನದ ಧ್ವನಿಯ ಮೂಲಕ ಸುಸೂತ್ರವಾಗಿ ಇಂಗ್ಲಿಷ್ ಮಾತನಾಡುವುದನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಅವರ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇವರನ್ನು ನೋಡುವ ಕುತೂಹಲ ಯಾರಿಗಿಲ್ಲ ಹೇಳಿ!? ಇಷ್ಟು ಗಮನ ಸೆಳೆಯುತ್ತಿರುವ ಮಹಿಳೆ ಬೇರಾರು ಅಲ್ಲ, ಸಿಸಿಲಿಯಾ ಮಾರ್ಗರೆಟ್ ಲಾರೆನ್ಸ್. ಬೆಂಗಳೂರಿನ ಸದಾಶಿವನಗರದಲ್ಲಿ ಪೇಪರ್ ಆಯುವ ಕೆಲಸ ಮಾಡುತ್ತಿರುವವರು.
ಇವರು ಇಂಗ್ಲಿಷ್ ಮಾತನಾಡುವ ವೀಡಿಯೋವನ್ನು ಶಚಿನಾ ಹೆಗ್ಗರ್ ಎಂಬವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಮಹಿಳೆ ಬಹಳ ಸಲೀಸಾಗಿ ಇಂಗ್ಲಿಷ್ ಮಾತನಾಡಿದ್ದು, ಜಪಾನಿನಲ್ಲಿ 7 ವರ್ಷಗಳ ಕಾಲ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ವೀಡಿಯೋ ಜೊತೆಗೆ ಶಚಿನಾ ಹೆಗ್ಗರ್ ಅವರು ನಿಮ್ಮ ಸುತ್ತಲೂ ಈ ರೀತಿಯ ಅನೇಕ ಕಥೆಗಳಿರುತ್ತದೆ. ನೀವು ಮಾಡಬೇಕಾಗಿರುವುದನ್ನು ನಿಲ್ಲಿಸಿ ಸುತ್ತಲೂ ನೋಡಿ. ಕೆಲವು ಸುಂದರ ಮತ್ತೆ ಕೆಲವು ನೋವಿನದು. ಆದರೆ ಕೆಲವು ಹೂಗಳಿಲ್ಲದೆಯೇ ಇರುವ ಜೀವನ ಯಾವುದು? ಈ ಅದ್ಭುತ ಚೈತನ್ಯವನ್ನು ಹೊಂದಿರುವ ಮಹಿಳೆಯನ್ನು ಸಂಪರ್ಕಿಸಲು ಬಯಸುತ್ತೀರಾ. ನಿಮ್ಮಲ್ಲಿ ಯಾರಾದರೂ ಆಕೆಯನ್ನು ನೋಡಿದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
ಈ ವೀಡಿಯೋ ನೋಡಿದ ನೆಟ್ಟಿಗರು ಮಹಿಳೆಯ ಜೀವನೋತ್ಸಹ ನೋಡಿ ಅಚ್ಚರಿಗೊಂಡಿದ್ದಾರೆ.
ಅಲ್ಲದೇ, ಅನೇಕರು ಸಿಸಿಲಿಯಾ ಭಾನುವಾರ ಹೋಲಿ ಘೋಸ್ಟ್ ಚರ್ಚ್ ನಲ್ಲಿ ಯಾವಾಗಲೂ ಇರುತ್ತಾರೆ ಎಂದು ಹೇಳಿದ್ದಾರೆ.