ಪ್ರಾಣ ಉಳಿಸಿಕೊಳ್ಳಲು ದೇಶ ತೊರೆಯುತ್ತಿರುವ ಅಫ್ಘಾನ್ ಪ್ರಜೆಗಳು | ಮನಕಲಕುವಂತಿದೆ ವಿಮಾನ ಹತ್ತಲು ನಡೆದ ನೂಕುನುಗ್ಗಲು
ಕಾಬುಲ್: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಹಿನ್ನಲೆಯಲ್ಲಿ ಇಲ್ಲಿಯ ಜನರು ಪ್ರಾಣ ರಕ್ಷಿಸಿಕೊಳ್ಳಲು ವಿಮಾನ ಏರುತ್ತಿರುವ ದೃಶ್ಯ ಮನಕಲಕುವಂತಿದೆ.
ಅಫ್ಘನ್ನಲ್ಲಿ ನೆಲೆಸಿದ್ದ ವಿದೇಶಿಯರು ವಿಮಾನಗಳ ಮೂಲಕ ತಮ್ಮ ದೇಶಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ. ಅಫ್ಘನ್‌ನಿಂದ ಎಲ್ಲ ವಾಣಿಜ್ಯ ವಿಮಾನಗಳ ಹಾರಾಟ ರದ್ದಾಗಿದ್ದು, ಅಫ್ಘಾನಿಸ್ತಾನದ ಕಾಬೂಲ್ ಏರ್‌ಪೋರ್ಟ್ ಬಳಿ ತಾಲೀಬಾನಿಗಳು ಫೈರಿಂಗ್ ನಡೆಸಿದ್ದಾರೆ. ಅಫ್ಘಾನಿಸ್ತಾನ ಈಗ ಸಂಪೂರ್ಣವಾಗಿ ತಾಲಿಬಾನಿಗಳ ವಶವಾಗಿದೆ.
ಸ್ವದೇಶೀಯರ ಮೇಲೆ ಪೈಶಾಚಿಕತೆ ಮೆರೆಯುತ್ತಿದ್ದಾರೆ. ನೂರಾರು ಅಫ್ಘನ್ನರು ತಮ್ಮ ತಾಯ್ನಾಡನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಲು ಗಡಿ ಭಾಗಗಳತ್ತ ದೌಡಾಯಿಸುತ್ತಿದ್ದಾರೆ.
ಈ ಮಧ್ಯೆ ಗುಂಡಿನ ದಾಳಿ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ರದ್ದು ಪಡಿಸಲಾಗಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಅಕ್ಷರಶಃ ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಈ ಉಗ್ರರಿಂದ ತಪ್ಪಿಸಿಕೊಂಡು ಮಾನ, ಪ್ರಾಣವನ್ನು ಉಳಿಸಿಕೊಳ್ಳಲು ಜನರು ದೇಶಬಿಟ್ಟು ಹೊರಡುತ್ತಿದ್ದಾರೆ. ಆದರೆ ಬೇರೆ ದೇಶಗಳಿಗೆ ಹೋಗಲು ಸಾರಿಗೆ ಸೌಕರ್ಯಗಳೇ ಇಲ್ಲದೇ ಅಕ್ಷರಶಃ ನಲುಗಿ ಹೋಗಿದ್ದಾರೆ.
ಈ ನಡುವೆಯೇ ಕಾಬುಲ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಒಂದು ವಿಮಾನವನ್ನು ಹತ್ತಲು ಅಫ್ಘಾನ್ ಪ್ರಜೆಗಳು ಮುಗಿಬಿದ್ದಿದ್ದು, ನೂಕು ನುಗ್ಗಲು ಉಂಟಾದ ದೃಶ್ಯವೀಗ ವೈರಲ್ ಆಗಿದೆ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:
Sad scenes from Kabul airport. Thousands trying to board a plane with capacity of few hundreds. Future is uncertain with Taliban at gates of airport. US shud never to forgiven for this act. Pray for Afghanistan. #Talibanpic.twitter.com/Jk8D3Wo5Sw
— Netbuzz Africa (@netbuzzafrica) August 16, 2021
ವಿಮಾನ ಹತ್ತಲು ಹತ್ತು ಹಲವು ನಿಯಮಗಳು ಇರುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾನ ಹತ್ತಲು ಅನುಮತಿ ನೀಡಲಾಗುತ್ತದೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೇ ವಿಮಾನ ನಿಲ್ದಾಣಕ್ಕೆ ನುಗ್ಗಿರುವ ಪ್ರಜೆಗಳು, ಪ್ರಾಣವನ್ನು ಉಳಿಸಿಕೊಂಡರೆ ಸಾಕು ಎನ್ನುವಂತೆ ಏಣಿ ಮೂಲಕ ವಿಮಾನ ಹತ್ತಲು ನೂಕು ನುಗ್ಗಲು ಮಾಡಿರುವ ದೃಶ್ಯವನ್ನು ಕಾಣಬಹುದಾಗಿದೆ.
ದೇಶದ ಬಹುತೇಕ ಭಾಗವನ್ನು ಈಗಾಗಲೇ ತನ್ನ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು, ಭಾನುವಾರ ಬೆಳಿಗ್ಗೆಯಷ್ಟೇ ಜಲಾಲಾಬಾದ್ ಎಂಬ ಪ್ರಮುಖ ನಗರವನ್ನು ಯಾವುದೇ ಪ್ರತಿರೋಧವಿಲ್ಲದೇ ಅನಾಯಾಸವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
ಸದ್ಯದ ಮಾಹಿತಿ ಪ್ರಕಾರ, ದೇಶದಿಂದ ಹೊರಹೋಗುವ ಎಲ್ಲ ಗಡಿ ಮಾರ್ಗಗಳನ್ನು ತಾಲಿಬಾನ್ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಕಾಬೂಲ್‌ನ ವಿಮಾನ ನಿಲ್ದಾಣ ಮಾತ್ರವೇ ಈಗ ದೇಶದಿಂದ ಹೊರ ಹೋಗಲು ಇರುವ ಏಕೈಕ ಮಾರ್ಗವಾಗಿ ಉಳಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಫ್ಘಾನ್ ರಾಜಧಾನಿ ಕಾಬೂಲ್ ತಾಲಿಬಾನ್ ವಶವಾಗಿರುವ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನದಿಂದ ತೆರಳಲು ಬಯಸುವವರಿಗೆ ಅವಕಾಶ ಮಾಡಿಕೊಡಬೇಕು ಎಂದು ತಾಲಿಬಾನ್ ಸಂಘಟನೆಗೆ 60 ದೇಶಗಳಿಂದ ಮನವಿ ಮಾಡಿಕೊಳ್ಳಲಾಗಿದೆ.
ಭಾರತ ಸರ್ಕಾರವು ಏರ್ ಇಂಡಿಯಾ ವಿಮಾನಗಳನ್ನು (Air India) ಸನ್ನದ್ಧ ಸ್ಥಿತಿಯಲ್ಲಿರಿಸಿದೆ. ಕಾಬೂಲ್ನಿಂದ ಹೊಸ ದಿಲ್ಲಿಗೆ ವಿಮಾನಗಳಲ್ಲಿ ಭಾರತೀಯರನ್ನು ಕರೆತರಲು ಎರಡು ವಿಮಾನಗಳು ಸಿದ್ಧವಾಗಿ ನಿಂತಿವೆ.
ಇದೀಗ ವಿಮಾನದಿಂದ ಬಿದ್ದು ಮೂರು ಜನ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಸುರಕ್ಷಿತ ಸ್ಥಳ ತಲುಪಲು ವಿಮಾನ ಏರಿದ ಜನ ವಿಮಾನದ ಟಯರ್ ಹಿಡಿದು ಪ್ರಯಾಣ ಮಾಡಿದ್ದಾರೆ. ವಿಮಾನ ಟೇಕಾಫ್ ಆಗುತ್ತಿದ್ದಂತೆ ಗಾಳಿಯ ರಭಸಕ್ಕೆ ಕಾಬೂಲ್ ಮಧ್ಯಭಾಗದಲ್ಲಿ ಮೂವರು ಮೇಲಿನಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.