ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆ ಜೊತೆಗೆ ಪ್ರಮುಖ ನಾಯಕರ ಟ್ವಿಟರ್ ಖಾತೆ ಬ್ಲಾಕ್ !!

Share the Article

ಭಾರತದಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಫೋಟೋ, ಹೆಸರು, ಪೋಷಕರ ಫೋಟೋಗಳನ್ನು ಪ್ರಕಟಿಸುವಂತಿಲ್ಲ. ಹಾಗಿದ್ದೂ, ಆ ರೀತಿಯಲ್ಲಿ ಕಾನೂನಿನ ಉಲ್ಲಂಘನೆ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯ ಜೊತೆಗೆ ಕೆಲ ನಾಯಕರ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ.

ಅತ್ಯಾಚಾರಕ್ಕೀಡಾಗಿ ಕೊಲೆಯಾದ 9 ವರ್ಷದ ಬಾಲಕಿಯ ಕುಟುಂಬಸ್ಥರ ಫೋಟೋವನ್ನು ಶೇರ್ ಮಾಡಿ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿ ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಯನ್ನು ಕಳೆದ ವಾರ ಬ್ಲಾಕ್ ಮಾಡಿತ್ತು. ಇದಾದ ಬಳಿಕ ಈಗ ಪಕ್ಷದ ಖಾತೆಯ ಜೊತೆಗೆ ಹಲವು ನಾಯಕರ ಮತ್ತು ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ.

ಈ ಬಗ್ಗೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥ ರೋಹನ್ ಗುಪ್ತ ಪ್ರತಿಕ್ರಿಯಿಸಿ, ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಮತ್ತು ಸುಮಾರು 5 ಸಾವಿರ ಹಿರಿಯ ನಾಯಕರು ಮತ್ತು ಕಾರ್ಯಕರ್ತರ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ಸರ್ಕಾರದ ಒತ್ತಡದ ಮೇರೆಗೆ ಕಾಂಗ್ರೆಸ್ ನಾಯಕರ ವಿರುದ್ಧ ಟ್ವಿಟ್ಟರ್ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರದ ಒತ್ತಡದಲ್ಲಿ ಟ್ವಿಟ್ಟರ್ ಸ್ಪಷ್ಟವಾಗಿ ಕೆಲಸ ಮಾಡುತ್ತಿದೆ. ಕೆಲ ದಿನಗಳ ಹಿಂದೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಅದೇ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿತ್ತು, ಆದರೆ ಆಯೋಗ ಫೋಟೋವನ್ನು ತೆಗೆಯಲಿಲ್ಲ ಎಂದು ಹೇಳಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲಾ, ಕೆ ಸಿ ವೇಣುಗೋಪಾಲ್, ಅಜಯ್ ಮಕೇನ್, ಪಕ್ಷದ ಸಚೇತಕ ಮಣಿಕ್ಕಮ್ ಠಾಕೋರ್, ಅಸ್ಸಾಂ ಕಾಂಗ್ರೆಸ್ ಉಸ್ತುವಾರಿ ಮತ್ತು ಕೇಂದ್ರದ ಮಾಜಿ ಸಚಿವ ಜಿತೇಂದ್ರ ಸಿಂಗ್ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಟ್ವಿಟ್ಟರ್ ಖಾತೆಗಳನ್ನು ಸಹ ಬ್ಲಾಕ್ ಮಾಡಲಾಗಿದೆ.

ಈ ಕುರಿತು ಬುಧವಾರ ರಾತ್ರಿ ಪಕ್ಷದ ಸಂವಹನ ವಿಭಾಗದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಪ್ರಣವ್ ಜಾ ಟ್ವೀಟ್ ಮಾಡಿದ್ದು ಕೊನೆಗೆ ಅವರ ಖಾತೆಯೂ ಬ್ಲಾಕ್ ಆಗಿದೆ.

ಕಳೆದ ವಾರ ರಾಹುಲ್ ಗಾಂಧಿ 9 ವರ್ಷದ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದ ಬಾಲಕಿಯ ಕುಟುಂಬಸ್ಥರ ಫೋಟೋವನ್ನು ಪ್ರಕಟಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಟ್ವಿಟ್ಟರ್ ಸಂಸ್ಥೆಗೆ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿತ್ತು. ಈ ದೂರಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಖಾತೆಯನ್ನು ಬ್ಲಾಕ್ ಮಾಡಲಾಗಿತ್ತು.

ಭಾರತದಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಫೋಟೋ, ಹೆಸರು, ಪೋಷಕರ ಫೋಟೋಗಳನ್ನು ಪ್ರಕಟಿಸುವಂತಿಲ್ಲ. ಇದು ಕಾನೂನಿನ ಉಲ್ಲಂಘನೆ. 2018ರಲ್ಲಿ ಜಮ್ಮು ಕಾಶ್ಮೀರ ಕಥುವಾದ 8 ವರ್ಷದ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಗುರುತನ್ನು ಮಾಧ್ಯಮ ಸಂಸ್ಥೆಗಳು ಪ್ರಕಟಿಸಿತ್ತು.

ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಡ ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿ 12 ಮಾಧ್ಯಮ ಸಂಸ್ಥೆಗಳಿಗೆ ತಲಾ 10 ಲಕ್ಷ ರೂ. ದಂಡವನ್ನು ವಿಧಿಸಿತ್ತು.

ಹಾಗೆಯೇ, ಹಲವು ಕಾಂಗ್ರೆಸ್ ನಾಯಕರ ಖಾತೆಗಳನ್ನು ತಡೆಹಿಡಿದಿರುವ ಕ್ರಮದ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವಿಟ್ಟರ್ ಸಂಸ್ಥೆ, ನಿಯಮ ಎಲ್ಲರಿಗೂ ನಿಷ್ಪಕ್ಷಪಾತವಾಗಿ, ನ್ಯಾಯಯುತವಾಗಿ ಅನ್ವಯವಾಗುತ್ತದೆ ಎಂದು ಹೇಳಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಟ್ವಿಟ್ಟರ್ ವಕ್ತಾರ, ಸೋಷಿಯಲ್ ಮೀಡಿಯಾದ ನಿಯಮಗಳನ್ನು ಮೀರಿದ ಯಾರೇ ಆದರೂ ಅವರ ವಿರುದ್ಧ ಕ್ರಮ ಪೂರ್ವಭಾವಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Leave A Reply

Your email address will not be published.