ರಾಜ್ಯ ಸಚಿವ ಸಂಪುಟದಲ್ಲಿ ಜಾರಕಿಹೊಳಿ ಕುಟುಂಬವನ್ನು ಕಡೆಗಣಿಸಲಾಯಿತೇ? ಇದೇ ಮೊದಲ ಬಾರಿ ಜಾರಕಿಹೊಳಿ ಸಹೋದರರಿಲ್ಲದೆ ರಚನೆಯಾದ ಸಚಿವ ಸಂಪುಟ
ಸುಮಾರು 17 ವರ್ಷಗಳ ನಂತರ ಗೋಕಾಕಿನ ಪ್ರಭಾವಿ ರಾಜಕಾರಣಿ ಕುಟುಂಬದ ತಲೆ ಇಲ್ಲದೇ ಇದೇ ಮೊದಲ ಬಾರಿ ಕರ್ನಾಟಕ ರಾಜ್ಯ ಸಚಿವ ಸಂಪುಟ ರಚನೆಯಾಗಿದೆ.
ಸುಮಾರು 2004 ನೇ ಇಸವಿಯಿಂದಲೂ ಜಾರಕಿಹೊಳಿ ಕುಟುಂಬದ ಒಬ್ಬ ಸದಸ್ಯರಾದರೂ ಸಚಿವ ಸ್ಥಾನ ಗೊಟ್ಟಿಸಿಕೊಳ್ಳುತ್ತಿದ್ದರು,ಆದರೆ ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಾರಕಿಹೊಳಿ ಸಹೋದರರ ಆಳ್ವಿಕೆಗೆ ಮೊದಲ ಬಾರಿಗೆ ಬ್ರೇಕ್ ಹಾಕಿದ್ದು, ಜಾರಕಿಹೊಳಿ ಕುಟುಂಬವನ್ನು ಕಡೆಗಣಿಸಲಾಗಿತೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡುವುದು ಸಾಮಾನ್ಯ.
ಶಾಸಕರಾದ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದಾಗಿನಿಂದಲೂ ಜಾರಕಿಹೊಳಿ ಕುಟುಂಬವು ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ರಮೇಶ್ ಮತ್ತು ಬಾಲಚಂದ್ರ ಕ್ರಮವಾಗಿ ಗೋಕಾಕ ಮತ್ತು ಅರಭಾವಿಯಿಂದ ಸತತವಾಗಿ ಆರು ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದಿದ್ದಾರೆ, ಸತೀಶ್ ಕಳೆದ ಮೂರು ಚುನಾವಣೆಗಳಲ್ಲಿ ಯಮಕನಮರಡಿ ಕ್ಷೇತ್ರದಿಂದ ನೇರವಾಗಿ ರಾಜ್ಯ ವಿಧಾನಸಭೆಗೆ ಗೆಲ್ಲುವ ಮುನ್ನ ಎರಡು ಬಾರಿ ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದರು.
ಈ ಹಿಂದೆ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ಇತ್ತೀಚೆಗೆ ಸೆಕ್ಸ್-ಸಿಡಿ ಹಗರಣದಲ್ಲಿ ಸಿಕ್ಕಿಬಿದ್ದ ನಂತರ ಸಚಿವ ಸ್ಥಾನದಿಂದ ಕೆಳಗಿಳಿದಿದ್ದು, ಈ ಘಟನೆಯಿಂದ ತೀವ್ರ ಮುಖಭಂಗ ಅನುಭವಿಸಿರುವುದು ಎಲ್ಲರಿಗೂ ತಿಳಿದ ವಿಚಾರ.
2004 ರಲ್ಲಿ ಸತೀಶ್ ಮಾಜಿ ಸಿಎಂ (ದಿವಂಗತ) ಧರಂ ಸಿಂಗ್ ಅವರ ಸಂಪುಟಕ್ಕೆ ಪ್ರವೇಶಿಸುವುದರೊಂದಿಗೆ ಜಾರಕಿಹೊಳಿ ಸಹೋದರರ ಸಚಿವ ಸ್ಥಾನ ನೀಡಿಕೆ ‘ವಾಡಿಕೆ’ ಆರಂಭವಾಯಿತು. ಅಂದು ಅವರು ಕ್ಯಾಬಿನೆಟ್‌ನಲ್ಲಿ ಜವಳಿ ಸಚಿವರಾಗಿದ್ದರು ಮತ್ತು ಎರಡು ವರ್ಷಗಳ ನಂತರ, ಬಾಲಚಂದ್ರ ಜಾರಕಿಹೊಳಿ ಬಿಜೆಪಿ/ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕ್ಯಾಬಿನೆಟ್‌ಗೆ ಪ್ರವೇಶಿಸಿದ್ದರು.
2008 ರಲ್ಲಿ ಸಿಎಂ ಯಡಿಯೂರಪ್ಪನವರ ನಿರ್ಗಮನದ ನಂತರ ಜಗದೀಶ್ ಶೆಟ್ಟರ್ ಅವರು ಸಿಎಂ ಆದರು. ಅವರ ಸಂಪುಟದಲ್ಲೂ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕ ಆಡಳಿತ ಸಚಿವರಾಗಿ ಸಂಪುಟ ಪ್ರವೇಶಿಸಿ 2012 ರವರೆಗೆ ಖಾತೆಯನ್ನು ನಿರ್ವಹಿಸಿದ್ದರು. ಸತೀಶ್ ಜಾರಕಿಹೊಳಿ 2013 ರಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರವನ್ನು ರಚಿಸಿದಾಗ ಮತ್ತೊಮ್ಮೆ ಸಂಪುಟಕ್ಕೆ ಆಯ್ಕೆಯಾದರು. ಆದಾಗ್ಯೂ, ಸತೀಶ್ ಅವರು ಸಂಪುಟದಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಸತೀಶ್ ಅವರ ಬಳಿಕ ಅವರ ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನಕ್ಕೆ ಬದಲಾಯಿಸಲಾಯಿತು.
2018 ರಲ್ಲಿ ರಮೇಶ್ ಮತ್ತೊಮ್ಮೆ ರಾಜ್ಯ ಸಚಿವ ಸಂಪುಟದಲ್ಲಿ ಸಾರ್ವಜನಿಕ ಆಡಳಿತ ಸಚಿವರಾದರು. ಬಿಎಸ್ ಯಡಿಯೂರಪ್ಪನವರ ಸಂಪುಟಕ್ಕೆ ಪ್ರವೇಶಿಸಿದ ನಂತರ, ರಮೇಶ್ ಜಲ ಸಂಪನ್ಮೂಲ ಸಚಿವರಾದರು, ಸೆಕ್ಸ್ ಸಿಡಿ ಹಗರಣದ ನಂತರ ಅವರು ರಾಜೀನಾಮೆ ನೀಡುವವರೆಗೂ ಖಾತೆಯನ್ನು ನಿರ್ವಹಿಸಿದ್ದರು.
ಬಿಜೆಪಿಯ ಉನ್ನತ ಅಧಿಕಾರಿಗಳು, ಜಾರಕಿಹೊಳಿ ಸಹೋದರರಿಗೆ ರಮೇಶ್ ಅವರಿಗೆ ಕ್ಲೀನ್ ಚಿಟ್ ದೊರೆತ ನಂತರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆ ನೀಡಿದ್ದಾರೆ. ಮೂಲಗಳ ಪ್ರಕಾರ, ಜಾರಕಿಹೊಳಿ ಸಹೋದರರು ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಬಾಲಚಂದ್ರ ಅವರಿಗೆ ಅವಕಾಶ ನೀಡಲು ಬಿಜೆಪಿಯಿಂದ ಪ್ರಸ್ತಾಪವನ್ನು ನೀಡಿದ್ದರು ಆದರೆ ಬಾಲಚಂದ್ರ ಜಾರಕಿಹೊಳಿ ಅವರು ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಸ್ಥಾನವನ್ನು ಈಗಾಗಲೇ ಹೊಂದಿದ್ದರಿಂದ ಆ ಪ್ರಸ್ತಾಪವನ್ನು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ ಎನ್ನಲಾಗಿದೆ.ಸದ್ಯ ಇದೇ ಮೊದಲ ಬಾರಿ ಜಾರಕಿಹೊಳಿ ಕುಟುಂಬದ ಸದಸ್ಯರಿಲ್ಲದೇ ಸಚಿವ ಸಂಪುಟ ರಚನೆಯಾಗಿದೆ.