ರಾಜಕೀಯ ಚಾಣಕ್ಯ, ವ್ಯೂಹ ನಿಪುಣ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸಲಹೆಗಾರ ಹುದ್ದೆಗೆ ರಾಜೀನಾಮೆ | ಪಂಜಾಬ್ ಕಾಂಗ್ರೆಸ್ ಗೆ ತೀವ್ರ ಹೊಡೆತ

ನವದೆಹಲಿ : ರಾಜಕೀಯ ಚಾಣಕ್ಯ, ತಂತ್ರಗಾರಿಕಾ ನಿಪುಣ, ತನ್ನ ವ್ಯೂಹ ರಚನೆಯ ಮೂಲಕ ಹಲವು ಚುನಾವಣೆಗಳನ್ನು ಗೆದ್ದು ಕೊಟ್ಟ ಪಂಡಿತ ಕೈ ಕೊಟ್ಟಿದ್ದಾರೆ.

 

ರಾಜಕೀಯ ಚಾಣಕ್ಯನೆಂದೇ ಕರೆಯಲ್ಪಡುವ ಪ್ರಶಾಂತ್ ಕಿಶೋರ್ ಅವರು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮುಖ್ಯ ಸಲಹೆಗಾರರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಮುಂದಿನ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅವರ ನೈಪುಣ್ಯದ ಬೆಂಬಲ ಮಿಸ್ ಆಗಲಿದೆ.

ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ವಿರುದ್ಧ ಗೆಲುವು ಸಾಧಿಸುವಲ್ಲಿ ಸಹಾಯ ಮಾಡುತ್ತಿದ್ದ ಕಿಶೋರ್ ಅವರನ್ನು, ಮಾರ್ಚ್‌ನಲ್ಲಿ ತಮ್ಮ ಮುಖ್ಯ ಸಲಹೆಗಾರರಾಗಿ ನೇಮಿಸಿಕೊಂಡಿರುವುದಾಗಿ ಸಿಂಗ್ ಘೋಷಿಸಿದ್ದರು.

ಆದರೆ ಇದೀಗ, ಕಿಶೋರ್ ಅವರು 2022 ರ ರಾಜ್ಯ ಚುನಾವಣೆಗಳಲ್ಲಿ ತಾವು ತೊಡಗಿಸಿಕೊಳ್ಳುವುದಿಲ್ಲ ಹಾಗೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರ ವಹಿಸುವುದರಿಂದ ತಾತ್ಕಾಲಿಕ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ಕ್ಯಾಪ್ಟನ್ ಸಿಂಗ್‌ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಮುಂದಿನ ವರ್ಷದ ಚುನಾವಣೆಗಳಲ್ಲಿ ತಾವು ಪಾತ್ರ
ವಹಿಸುವುದಿಲ್ಲ. ತಮ್ಮ ಗಮನವೇನಿದ್ದರೂ 2024 ರ
ಲೋಕಸಭಾ ಚುನಾವಣೆಗಳ ಮೇಲಿರಲಿದೆ ಎಂದು ಕಿಶೋರ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಕಿಶೋರ್ ಅವರ ಈ ನಿರ್ಧಾರದಿಂದ, ಈಗಷ್ಟೇ ಪಕ್ಷದ ಆಂತರಿಕ ಕಲಹಗಳನ್ನು ಇತ್ಯರ್ಥಪಡಿಸಿಕೊಂಡಿದ್ದ ಪಂಜಾಬ್ ಕಾಂಗ್ರೆಸ್ಸಿನ ಚುನಾವಣಾ ಸಿದ್ಧತೆಗೆ ಏಟು ಬೀಳುವುದು ಗ್ಯಾರಂಟಿಯಾಗಿದೆ.

Leave A Reply

Your email address will not be published.