ದ.ಕ.ಗಡಿ ಭಾಗದ ಮದ್ಯದಂಗಡಿ ಬಂದ್ | ಕೋವಿಡ್ ತಡೆಗೆ ಮಹತ್ವದ ನಿರ್ಧಾರ ತೆಗೆದುಕೊಂಡ ಜಿಲ್ಲಾಡಳಿತ
ಮಂಗಳೂರು : ಕೇರಳ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಿರುವುದರಿಂದ, ಕೇರಳದ ಗಡಿಭಾಗ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಮದ್ಯದಂಗಡಿ ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಕೇರಳದ
ಕಾಸರಗೋಡು ಜಿಲ್ಲೆಯ ಸಾರ್ವಜನಿಕರು ಮದ್ಯ ಸೇವನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳ
ಮದ್ಯದಂಗಡಿಗಳನ್ನೇ ಅವಲಂಬಿಸಿರುವುದರಿಂದ, ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುವ
ಸಾಧ್ಯತೆಗಳು ಇರುವ ಕಾರಣ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಕೇರಳ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕು ಪ್ರದೇಶಗಳ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲಾ ಮದ್ಯದಂಗಡಿಗಳನ್ನು 2021ರ ಆಗಸ್ಟ್ 3 ರಿಂದ 15 ರವರೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಆದೇಶ ಹೊರಡಿಸಿದ್ದಾರೆ.
ಈ ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾ ಅಬಕಾರಿ ಉಪ ಆಯುಕ್ತರಿಗೆ ನಿರ್ದೇಶನ ನೀಡಲಾಗಿದ್ದು, ನಿಷೇಧಾಜ್ಞೆ ಜಾರಿಗೊಂಡಿರುವ ಸಮಯದಲ್ಲಿ ಆ ವ್ಯಾಪ್ತಿಗೊಳಪಟ್ಟ ವೈನ್‌ಶಾಪ್ ಅಥವಾ ಬಾರ್ ಗಳ ಮುಂದಿನ ಮತ್ತು ಹಿಂದಿನ ಬಾಗಿಲುಗಳಿಗೆ ಅಬಕಾರಿ ಇಲಾಖೆಯ ಮೊಹರು (ಸೀಲು) ಗಳನ್ನು ಹಾಕಿ ಕಡ್ಡಾಯವಾಗಿ ಮುಚ್ಚುವಂತೆ ನೋಡಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.