ದಕ್ಷಿಣ ಕನ್ನಡ ಕೋವಿಡ್ ತಪಾಸಣೆ ಪ್ರತಿದಿನ 12 ಸಾವಿರ ಪರೀಕ್ಷೆಯ ಗುರಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಏರಿಕೆ ಹಂತದಲ್ಲಿರುವ ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ತಪಾಸಣೆಯನ್ನು ದುಪ್ಪಟ್ಟು ಮಾಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಪ್ರತೀದಿನ 12 ಸಾವಿರ ಮಂದಿಯ ಪರೀಕ್ಷೆಯ ಗುರಿ ಇರಿಸಿದೆ.
ಪ್ರಸ್ತುತ ಪ್ರತೀದಿನ 7,500 ಕೊರೊನಾ ತಪಾಸಣೆ ನಡೆಯುತ್ತಿದೆ. ಇದಿಗà ಪ್ರತೀ ಕೊರೊನಾ ಸೋಂಕಿತರ ಸಂಪರ್ಕಿತರ ಪತ್ತೆಹಚ್ಚಿ ಅವರ ತಪಾಸಣೆಗಾಗಿ ಇಲಾಖೆಯಿಂದ ಪ್ರತ್ಯೇಕ ತಂಡ ರಚಿಸಲಾಗಿದೆ.
ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ಅವರು “ಉದಯವಾಣಿ’ ಜತೆಗೆ ಮಾತನಾಡಿ, “ಜಿಲ್ಲೆಯಲ್ಲಿ ಟೆಸ್ಟಿಂಗ್ ಅಧಿಕಗೊಳಿಸುವ ಸಲುವಾಗಿ ಹೆಚ್ಚುವರಿಯಾಗಿ 30 ಮಂದಿ ಪ್ರಯೋಗಾಲಯ ತಂತ್ರಜ್ಞರನ್ನು ನೇಮಿಸಲಾಗಿದೆ.
ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ತಂತ್ರಜ್ಞರ ಅಗತ್ಯವಿದ್ದರೆ ನೇಮಕ ಮಾಡಲು ಸೂಚಿಸಲಾಗಿದೆ. ಜತೆಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಂದೊಂದು ವಾಹನ ನೀಡುವ ಮೂಲಕ ಟೆಸ್ಟಿಂಗ್ ಮಾಡಲು ಹಾಗೂ ಸ್ಯಾಂಪಲ್ಗಳನ್ನು ಲ್ಯಾಬ್ಗಳಿಗೆ ಕಳುಹಿಸಲು ನೆರವಾಗುವ ವ್ಯವಸ್ಥೆ ಮಾಡಲಾಗಿದೆ.
ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್ಗೆ ಹಾಗೂ ಅಗತ್ಯವಿದ್ದರೆ ಆಸ್ಪತ್ರೆಗೆ ದಾಖಲು ಮಾಡಲು ಆದೇಶ ನೀಡಲಾಗಿದೆ. ಮಾಸ್ಕ್ ಧರಿಸದವರು ಹಾಗೂ ಸಾಮಾಜಿಕ ಅಂತರ ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲು ಗೃಹರಕ್ಷಕರನ್ನು ಮಾರ್ಷಲ್ಗಳಂತೆ ನಿಯೋಜಿಸಲಾಗಿದೆ’ ಎಂದು ತಿಳಿಸಿದ್ದಾರೆ.
“ದ.ಕ. ಜಿಲ್ಲೆಗೆ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಲು ಹೊರ ಜಿಲ್ಲೆಗಳಿಂದ ಸಾಕಷ್ಟು ಜನರು ಆಗಮಿಸುತ್ತಿದ್ದಾರೆ. ಅವರಲ್ಲಿ ಅನೇಕ ಮಂದಿಯಲ್ಲಿ ಕೊರೊನಾ ಸೋಂಕು ಕಂಡು ಬರುತ್ತಿರುವುದರಿಂದ ಅವರ ಲೆಕ್ಕ ಕೂಡ ನಮ್ಮ ಜಿಲ್ಲೆಗೆ ಬರುತ್ತಿದೆ. ನಮ್ಮಲ್ಲಿ ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ. ಇಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್, ಆ್ಯಂಬುಲೆನ್ಸ್ ಸಿಗದೇ ಸಾವು ಸಂಭವಿಸಿದ ಯಾವುದೇ ಉದಾಹರಣೆ ಇಲ್ಲ’ ಎಂದು ತಿಳಿಸಿದ್ದಾರೆ.