ಜನ ವಿರಳ ಇರುವ ಆ ಕಾಲೋನಿಯಲ್ಲಿ ಕಿಸ್ಸಿಂಗ್ ವರ್ಕ್ ಔಟ್ ಮಾಡಲು ಬರುವ ಜೋಡಿಗಳು | ಬೇಸತ್ತ ಸ್ಥಳೀಯರಿಂದ ‘ ನೋ ಕಿಸ್ಸಿಂಗ್ ಝೋನ್ ‘ ಬೋರ್ಡು ಹಾಕಿ ಎಚ್ಚರಿಕೆ
ಇಲ್ಲಿ ಕಸ ಹಾಕುವಂತಿಲ್ಲ, ಇಲ್ಲಿ ಕಾರು ಪಾರ್ಕ್ ಮಾಡುವಂತಿಲ್ಲ, ನೋ ಸ್ಮೋಕಿಂಗ್ ಝೋನ್ ಅನ್ನೋ ಬೋರ್ಡ್ಗಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ. ಆದರೆ ಈ ಬಾರಿ ಹೊಸದೊಂದು ಬೋರ್ಡ್ ಭಾರಿ ಸದ್ದು ಮಾಡುತ್ತಿದೆ.
ಅದೇನೆಂದರೆ ‘ನೋ ಕಿಸ್ಸಿಂಗ್ ಝೋನ್’ ಬೋರ್ಡ್. ಇಲ್ಲಿ ಯಾರೂ ಚುಂಬಿಸುವಂತಿಲ್ಲ ಎಂದು ನಿವಾಸಿಗಳು ಬರೆದ ಬೋರ್ಡ್ ಬಾರಿ ವೈರಲ್ ಆಗಿದೆ.
ಮುಂಬೈನ ಬೋರಿವಿಲಿಯಲ್ಲಿನ ಸತ್ಯಂ ಶಿವಂ ಸುಂದರಂ ಹೌಸಿಂಗ್ ಕಾಲೋನಿ ನಿವಾಸಿಗಳು ಈ ರೀತಿ ನೋ ಕಿಸ್ಸಿಂಗ್ ಝೋನ್(ಚುಂಬನ ನಿಷೇಧಿತ ಪ್ರದೇಶ) ಬೋರ್ಡ್ ಹಾಕಿ ಎಲ್ಲರ ಗಮನಸೆಳೆದಿದ್ದಾರೆ. ಜೋಡಿಗಳ ವಿಪರೀತ ಚುಂಬನಕ್ಕೆ ಫುಲ್ ಸ್ಟಾಪ್ ಹಾಕಲು ಈ ರೀತಿಯ ಐಡಿಯಾ ಮಾಡಿದ್ದಾರೆ.
ಸತ್ಯಂ ಶಿವಂ ಸುಂದರಂ ಹೌಸಿಂಗ್ ಕಾಲೋನಿ, ಮುಂಬೈ ಮಹಾ ನಗರದ ಬೋರಿವಿಲಿಯ ಅತ್ಯಂತ ಶಾಂತ ಹಾಗೂ ಸುಂದರ ಕಾಲೋನಿ. ಮರ ಗಿಡಗಳ ಜೊತೆಗೆ, ಟ್ರಾಫಿಕ್ ಇಲ್ಲದೆ ಹಾಗೂ ಮುಖ್ಯರಸ್ತೆಯಲ್ಲಿ ಸಂಚರಿಸದೆ ಈ ಸ್ಥಳ ತಲುಪುವ ಅವಕಾಶವೂ ಇದೆ. ಕೊರೋನಾ ಕಾರಣ ಬೋರಿವಿಲಿ ಸೇರಿದಂತೆ ಸುತ್ತಮುತ್ತಲಿನ ಪಾರ್ಕ್, ವಿಹಾರ ತಾಣಗಳು ಬಂದ್ ಮಾಡಲಾಗಿದೆ. ಹೀಗಾಗಿ ಪ್ರೇಮಿಗಳು, ಜೋಡಿಗಳು ಇದೀಗ ಸತ್ಯಂ ಶಿವಂ ಸುಂದರಂ ಹೌಸಿಂಗ್ ಕಾಲೋನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಸಂಜೆಯಾದರೆ ಸಾಕು, ಜೋಡಿ ಜೋಡಿ ಕಾರು ಬೈಕ್ನಲ್ಲಿ ಇಲ್ಲಿಗೆ ಬಂದು ಚುಂಬನದಲ್ಲಿ ನಿರತರಾಗುತ್ತಾರೆ. ಸರಿಯಾಗಿ ಅಧರದ ಮಧುರ ಹೀರಲು ಅಲ್ಲಿ ದುಂಬಿಗಳಂತೆ ಸೇರಿಕೊಳ್ಳುತ್ತಿದ್ದರು. ಪ್ರತಿ ದಿನ ಜೋಡಿಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ದಾರಿಯಲ್ಲಿ ಕಿಸ್ಸಿಂಗ್, ರೋಮ್ಯಾನ್ಸ್ ಜೋರಾಗತೊಡಗಿತು. ಸಂಜೆಯಾದರೆ ಕಾಲೋನಿ ದಾರಿಯತ್ತ ಕಣ್ಣಾಡಿಸಿದರೆ ಅಡಲ್ಟ್ ಸಿನಿಮಾ ರೀತಿ ಗೋಚರಿಸುತ್ತಿತ್ತು ಅನ್ನೋದು ಕಾಲೋನಿ ನಿವಾಸಿಗಳ ಮಾತು.
ಇದರಿಂದ ರೋಸಿ ಹೋದ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರಿಂದ ನಿವಾಸಿಗಳಿಗೆ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಈ ಚುಂಬನಕ್ಕೆ ಕಡಿವಾಣ ಹಾಕಲು ಪೊಲೀಸರು ಆಸಕ್ತಿ ತೋರಲಿಲ್ಲ.
ಕಾಲೋನಿಯಲ್ಲಿ ವರ್ಕೌಟ್ ಮಾಡಲು ತೊಡಗುವ ಜೋಡಿ ಹಕ್ಕಿಗಳಿಗೆ ಅಲ್ಲಿನ ಜನರೇ ಉಪಾಯ ಒಂದನ್ನು ಹುಡುಕಿದ್ದಾರೆ. ಅದೀಗ ವರ್ಕೌಟ್ ಕೂಡಾ ಆಗಿದೆ ಎನ್ನುವುದು ಅಲ್ಲಿನ ಮೂಲ ನಿವಾಸಿಗಳ ಹೇಳಿಕೆ.
ಅದೇನೆಂದರೆ, ಹೌಸಿಂಗ್ ಕಾಲೋನಿ ನಿವಾಸಿಗಳು ಸಭೆ ಸೇರಿ ಜೋಡಿಗಳು ಕಿಸ್ಸಿಂಗ್ ಮಾಡುವ ಕಾಲೋನಿ ಮುಂಭಾಗದ ದಾರಿಯಲ್ಲಿ ಪೈಂಟ್ ಮೂಲಕ ನೋ ಕಿಸ್ಸಿಂಗ್ ಝೋನ್ ಎಂದು ಬರೆದಿದ್ದಾರೆ. ಹಾಗೆಯೇ ಸಣ್ಣ ವಾರ್ನಿಂಗ್ ಸೈನ್ ಬೋರ್ಡ್ ಕೂಡ ಹಾಕಿದ್ದಾರೆ. ಈ ಸೈನ್ ಬೋರ್ಡ್ ಬಳಿಕ ಜೋಡಿಗಳ ಚುಂಬನ ಕಾಟ ಕೊಂಚ ಕಡಿಮೆಯಾಗಿದೆ ಎಂದು ಕಾಲೋನಿ ನಿವಾಸಿಗಳು ಹೇಳುತ್ತಿದ್ದಾರೆ.
ನಾವು ಪ್ರೇಮಿಗಳ ವಿರುದ್ಧ ಅಲ್ಲ, ಜೋಡಿಗಳು ಕಿಸ್ ಮಾಡಲು ನಮ್ಮ ಅಭ್ಯಂತರವಿಲ್ಲ. ಆದರೆ ನಮ್ಮ ಕಾಲೋನಿಯಲ್ಲಿ ಮಕ್ಕಳು, ಯುವತಿಯರು, ಮಹಿಳೆಯರು ಇದ್ದಾರೆ. ಪ್ರತಿ ದಿನ ಈ ರೀತಿ ಚುಂಬನ ದೃಶ್ಯಗಳಿಂದ ಅವರಿಗೂ ಮುಜುಗರ ಸಂದರ್ಭಗಳು ಎದುರಾಗುತ್ತಿದೆ. ಜೊತೆಗೆ ನಮ್ಮ ಮಕ್ಕಳಿಗೆ ಇದು ಪ್ರಚೋದನೆಯಾಗಬಾರದು ಅನ್ನೋ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ.