ಮೈದಾನವನ್ನು ಆಕ್ರಮಿಸಿಕೊಂಡು ಆಡಿದ ಭಾರತದ ಹಾಕಿ ವನಿತೆಯರು | ಬಲಿಷ್ಠ ಆಸ್ಟ್ರೇಲಿಯಾವನ್ನೇ ಬಡಿದು’ ಹಾಕಿ ‘ ಸೆಮಿಫೈನಲ್ ಗೆ ಲಗ್ಗೆ !
ಟೋಕಿಯೊ: ಇನ್ನೇನು ತಾವು ಸೋತು ಹೋದೆವು ಎಂದುಕೊಳ್ಳುವಾಗ, ಸರಣಿ ಸೋಲುಗಳ ನೋವು ಅವಮಾನದಿಂದ ಚಿಮ್ಮಿ ಮೇಲೆದ್ದಿದೆ ಮಹಿಳಾ ಹಾಕಿ ತಂಡ. ಒಲಿಂಪಿಕ್ಸ್ ಇತಿಹಾಸದಲ್ಲಿ 41 ವರ್ಷಗಳ ಬಳಿಕ ಎಂಟರ ಘಟ್ಟಕ್ಕೇರಿರುವ ಭಾರತ ಮಹಿಳಾ ಹಾಕಿ ತಂಡ, ಇಂದು ನಡೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ.
ಭಾರತದ ಪುರುಷರ ಹಾಕಿ ತಂಡ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದು, ಇದೀಗ ಮಹಿಳಾ ಹಾಕಿ ತಂಡ ಕೂಡ ಸೆಮಿಫೈನಲ್ ಪ್ರವೇಶಿಸಿದೆ.
ಆಸ್ಟ್ರೇಲಿಯಾದ ಎದುರು ಆಡುವಾಗ ಮೈಕೊಡವಿಕೊಂಡು ಮೈದಾನವಿಡಿ ಆಕ್ರಮಿಸಿಕೊಂಡು ಆಡಿದರು ನಮ್ಮ ಹುಡುಗಿಯರು. ಹಾಗಾಗಿ ಭಾರತೀಯ ಮಹಿಳಾ ಹಾಕಿ ತಂಡವು ಆಸ್ಟ್ರೇಲಿಯಾವನ್ನು 1-0 ಅಂತರದಿಂದ ಸೋಲಿಸಿ ಸೆಮಿಫೈನಲ್ ಗೆ ದಾಪುಗಾಲಿಟ್ಟಿದೆ. ಎ ಗುಂಪಿನಲ್ಲಿ ಹ್ಯಾಟ್ರಿಕ್ ಸೋಲಿನ ನಡುವೆಯೂ ಕಡೇ ಎರಡು ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿದ ಭಾರತ ತಂಡ, 6 ಪಾಯಿಂಟ್ಸ್ ಗಳೊಂದಿಗೆ 4ನೇ ಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
ಕಡೇ ಎರಡು ಹಣಾಹಣಿಯಲ್ಲಿ ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಎದುರು ಜಯ ದಾಖಲಿಸಿತ್ತು. ಮಹಿಳಾ ತಂಡ 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಅರ್ಹತೆ ಗಿಟ್ಟಿಸಿಕೊಂಡಾಗ ಎಂಟರಘಟ್ಟಕ್ಕೇರಿದ ಸಾಧನೆ ಮಾಡಿತ್ತು.
ವಿಶ್ವ ನಂ.4 ಆಸ್ಟ್ರೇಲಿಯಾ ಹಾಕಿ ತಂಡವೇ ಫೆವರಿಟ್ ಎನಿಸಿದರೂ ವಿಶ್ವ ನಂ.10ನೇ ಸ್ಥಾನದಲ್ಲಿರುವ ಭಾರತ, ಅಚ್ಚರಿ ಫಲಿತಾಂಶ ನೀಡಿ, ಇದೀಗ ಪದಕ ಗೆಲ್ಲುವ ಕಾತರದಲ್ಲಿದೆ.