ದಕ್ಷಿಣ ಕನ್ನಡ | ಕೇರಳದ ಗಡಿಭಾಗಗಳಲ್ಲಿ ತಪಾಸಣೆ ಚುರುಕು, ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಗೇಟ್ ಓಪನ್
ಮಂಗಳೂರು: ಕೊರೋನಾ ವೇಗವಾಗಿ ಹೆಚ್ಚುತ್ತಿರುವ ಕಾರಣ ನೀಡಿ ದ.ಕ ಜಿಲ್ಲಾಡಳಿತ ದಿಢೀರ್ ಆಗಿ ತಲಪಾಡಿ ಸಹಿತ ಕೇರಳ ಗಡಿಗಳಲ್ಲಿ ತಪಾಸಣೆ ಚುರುಕುಗೊಳಿಸಿದ ಜೊತೆಗೇ, ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಸೋಮವಾರದಿಂದ ಕೋವಿಡ್ ಟೆಸ್ಟ್ ಕೂಡಾ ಸ್ಥಗಿತಗೊಳಿಸಿದೆ.
ಇದರಿಂದ ಕಾಸರಗೋಡು ಭಾಗದ ಜನತೆ ಸಿಟ್ಟಿಗೆದ್ದಿದ್ದಾರೆ. ಇನ್ನೊಂದೆಡೆ ಸ್ಥಳದಲ್ಲಿ ಜಿಲ್ಲಾಡಳಿತ ಹಾಗೂ ಮಂಗಳೂರ ಪೊಲೀಸರ ವಿರುದ್ಧ ಪದೇಪದೇ ನಿಂದನೆಯಲ್ಲಿ ತೊಡಗಿದ್ದ ಕೇರಳದ ಓರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮುಖ್ಯಮಂತ್ರಿ ನಿರ್ದೇಶನದಂತೆ ಕೊರೋನಾ ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆರಂಭಿಸಿದ್ದು,
ಇದುವರೆಗೆ ನೆಗೆಟಿವ್ ಸರ್ಟಿಫಿಕೇಟ್ ಇಲ್ಲದಿದ್ದರೂ ಸ್ಥಳದಲ್ಲೇ ಕೋವಿಡ್ ಟೆಸ್ಟ್ ಮಾಡಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿತ್ತು.
ಆದರೆ ಈಗ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇದ್ದರೆ ಮಾತ್ರವೇ ಜಿಲ್ಲೆಗೆ ಪ್ರವೇಶ ಎಂಬುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಏರುಗತಿಯಲ್ಲಿದೆ. ಹಾಗಾಗಿ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದರಿಂದ ಕಾಸರಗೋಡು, ಮಂಗಳೂರು ಮಧ್ಯೆ ಸಂಚರಿಸುವ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಸೋಮವಾರದಿಂದ ಪದವಿ ಪರೀಕ್ಷೆ ಪ್ರಾರಂಭಗೊಂಡಿದ್ದು, ಕಾಸರಗೋಡು ಭಾಗದಿಂದ ಮಂಗಳೂರಿನ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಮಾತ್ರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.
ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮತ್ತು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಸೋಮವಾರ ಬೆಳಗ್ಗೆ ತಲಪಾಡಿಯ ಗಡಿ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.