ಮಂಗಳೂರು | ಕೊರೋನಾ ನಿಯಮಾವಳಿ ಗಾಳಿಗೆ ತೂರಿ ಜಿಲ್ಲಾ ಕಾಂಗ್ರೆಸ್ ನಿಂದ ಸಮಾರಂಭ ಆಯೋಜನೆ
ಮಂಗಳೂರು: ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದ.ಕ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕೋವಿಡ್ -19 ನಿಯಮಾವಳಿ ಉಲ್ಲಂಘಿಸಲಾಗಿದ್ದು, ನೂರಾರು ಜನ ಇಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಗಸ್ಟ 10ರವರೆಗೆ ಯಾವುದೇ ಸಭೆ ಸಮಾರಂಭ ಆಯೋಜಿಸದಂತೆ ನಿನ್ನೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರು.ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ.
ಯಾವುದೇ ರೀತಿಯ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಭಾಗವಹಿಸಿದ್ದು, ಸ್ಯಾನಿಟೈಸೇಶನ್ ಪ್ರಕ್ರಿಯೆಯೂ ಇರಲಿಲ್ಲ ಎಂದು ತಿಳಿದುಬಂದಿದೆ.
ದ.ಕ ಜಿಲ್ಲಾ ಹಿಂದುಳಿದ ವರ್ಗ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖಂಡರಾದ ಬಿ.ಕೆ. ಹರಿಪ್ರಸಾದ್, ಎಂ.ಬಿ.ಲಕ್ಷ್ಮೀನಾರಾಯಣ, ಶಾಸಕ ಯು.ಟಿ.ಖಾದರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಕರು, ವಿಧಾನ ಪರಿಷತ್ ಮಾಜಿ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಇದೊಂದು ಪೂರ್ವ ನಿಯೋಜಿತ ಕಾರ್ಯಕ್ರಮವಾಗಿದ್ದು, ಬೆಂಗಳೂರಿನಿಂದ ಪಕ್ಷದ ಮುಖಂಡರನ್ನೂ ಆಹ್ವಾನಿಸಲಾಗಿತ್ತು. ಎಲ್ಲರೂ ಬಂದಿರುವುದರಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಯಾವುದೇ ಕಾರ್ಯಕ್ರಮ ನಡೆಸುವುದಿಲ್ಲ ಎಂದವರು ತಿಳಿಸಿದ್ದಾರೆ.