ದಕ್ಷಿಣ ಕನ್ನಡ ಜಿಲ್ಲೆಯ ವಸತಿ ಶಾಲೆಗಳಲ್ಲಿ ದಾಖಲಾತಿ ಆರಂಭ!!ಇಲ್ಲಿದೆ ದಾಖಲಾತಿಗೆ ಬೇಕಾದ ಉಪಯುಕ್ತ ಮಾಹಿತಿಗಳು
ರಾಜ್ಯ ಸರ್ಕಾರದಿಂದ ಸ್ಥಾಪನೆಗೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ತಾಲೂಕಿನ ಕಮ್ಯಾಜಿ, ಕಲ್ಲಬೆಟ್ಟು, ನೆಲ್ಲಿತೀರ್ಥ, ಗುರುಪುರ ಬೆಳ್ತಂಗಡಿ ತಾಲೂಕಿನ ಮಚ್ಚಿನ, ಮುಂಡಾಜೆ, ಹೊಸಂಗಡಿ, ಬಂಟ್ವಾಳದ ವಗ್ಗ, ಮತ್ತೂರು ತಾಲೂಕಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯ ತಾಲೂಕಿನ ಪಂಜ ಮೊರಾರ್ಜಿ ದೇಸಾಯಿ/ ಡಾ. ಬಿ. ಆರ್. ಅಂಬೇಡ್ಕರ್, ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ 6 ರಿಂದ 10ನೇತರಗತಿಯ ವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಶೂ, ಬ್ಯಾಗ್, ಶುಚಿ ಸಾಮಗಿ, ಲೇಖನ ಸಾಮಗ್ರಿ ಪಠ್ಯಪುಸ್ತಕ ಹಾಗೂ ಇನ್ನಿತರ ಸಾಮಗ್ರಿಗಳನ್ನು ನೀಡುವುದರ ಜೊತೆಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಈ ಶಾಲೆಗಳಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅಂದರೆ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರವೇಶ ಲಭ್ಯವಿದೆ. ಶೋಷಕರ ವಾರ್ಷಿಕ ಆದಾಯದ ಮಿತಿಯು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಪ್ರವರ್ಗ-1 ರ ವಿದ್ಯಾರ್ಥಿಗಳಿಗೆ ರೂ. 2.50 ಲಕ್ಷ ಹಾಗೂ ಹಿಂದುಳಿದ ವರ್ಗಗಳಾದ ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ವಿದ್ಯಾಥಿಗಳಿಗೆ ವಾರ್ಷಿಕ ಆದಾಯ ರೂ. 1.00 ಲಕ್ಷ ಇರುತ್ತದೆ, 2021 22ನೇ ಸಾಲಿಗೆ 6ನೇತರಗತಿಗೆ 50 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು.
ಇದರಲ್ಲಿ ಶೇ. 50 ಸೀಟುಗಳು ವಿದ್ಯಾರ್ಥಿನಿಯರಿಗೆ ಕಾಯ್ದಿರಿಸಲಾಗಿದ್ದು,ಅಲ್ಲದೇ ಪ್ರತಿ ಶಾಲೆಯಲ್ಲಿ ಶೇ. 25 ರಷ್ಟು ಸೀಟುಗಳನ್ನು ಆಯಾ ತಾಲೂಕಿನ ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ಈ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಯಾವುದೇ ಶುಲ್ಕ ಪಾವತಿ ಇಲ್ಲ.ಸುಸಜ್ಜಿತ ಶಾಲಾ ಸಂಕೀರ್ಣ, ನುರಿತ ಬೋಧಕ ಸಿಬ್ಬಂದಿ, ಸಮರ್ಪಕ ಪ್ರಯೋಗಾಲಯ ಸಾಮಗಿ ಇತರೇ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿವೆ.
ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉಚಿತವಾಗಿ ಪಠ್ಯ ಪುಸ್ತಕ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿ, ಬ್ಯಾಗ್, ಹಾಸಿಗೆ, ಹೊದಿಕೆ, ಮಂಚ, ಟ್ರಂಕ್ ನೀಡಲಾಗುವುದು. ವರ್ಷದಲ್ಲಿ ಪ್ರತಿ ವಿದ್ಯಾರ್ಥಿಗೆ 3 ಜೊತೆ ಸಮವಸ್ತ್ರ, ಎರಡು ಜೊತೆ ಶೂ ಮತ್ತು ಸಾಕ್ಸ್ ನೀಡಲಾಗುವುದು. ಎಲ್ಲಾ ವಸತಿ ಶಾಲೆಗಳಿಗೆ ಅಗತ್ಯವಾದ ಗ್ರಂಥಾಲಯ ಮತ್ತು ಪ್ರಯೋಗಾಲಯಗಳ ಸೌಲಭ್ಯ ಹಾಗೂ ಕ್ರೀಡೋಪಕರಣಗಳನ್ನು ಸರಬರಾಜು ಮಾಡಲಾಗುವುದು.
ವಿದ್ಯಾರ್ಥಿಗಳಿಗೆ ಟೆಲಿಫೋನ್, ಕಂಪ್ಯೂಟರ್ ಮತ್ತು ಜಿಮ್ ಸೌಲಭ್ಯವಿದೆ. ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ಉಚಿತ ಟೂತ್ ಪೇಸ್ಟ್, ಸೋಪು, ಬ್ರಷ್, ಎಣ್ಣೆ ಹಾಗೂ ಪೌಡರ್ ನೀಡಲಾಗುತ್ತದೆ. ಊಟಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ. 1600/- ಖರ್ಚು ಮಾಡಲಾಗುವುದು. ಪ್ರತಿ ವಸತಿ ಶಾಲೆಗೆ ಓರ್ವ ಮಹಿಳಾ ಶುರೂಷಕಿಯ ಮೇಲ್ವಿಚಾರಣೆಯಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ನೆರವು ನೀಡಲಾಗುವುದು. ವಿದ್ಯಾರ್ಥಿಗಳು ಈ ಮೇಲಿನ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಂಡು ಗುಣಾತ್ಮಕ ಶಿಕ್ಷಣ ಪಡೆದು, ಜೀವನದಲ್ಲಿ ಯಶಸ್ಸು ಗಳಿಸಿ ಸುಸಂಸ್ಕೃತ ಪಜೆಗಳಾಗಬಹುದು.
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಶಾಲೆಯಲ್ಲಿ 6ನೇತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ರಾಜ್ಯದಾದ್ಯಂತ ಏಕಕಾಲದಲ್ಲಿ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಯನ್ನು ಆಯಾ ತಾಲೂಕು ಕೇಂದ್ರದಲ್ಲಿ 2021 ಸೆಪ್ಟೆಂಬರ್ 16 ರ ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.00 ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು, ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿರುವ ಪ್ರಶ್ನೆಪತ್ತಿಕೆಯು ನಾಲ್ಕನೇ ಹಾಗೂ ಐದನೇ ತರಗತಿಯ ಕನ್ನಡ, ಇಂಗ್ಲೀಷ್, ಗಣಿತ, ಸಮಾಜ ವಿಜ್ಞಾನ ಮತ್ತು ಸಾಮಾನ್ಯ ವಿಜ್ಞಾನ ವಿಷಯದಿಂದ ತಲಾ 20 ಅಂಕಗಳ ಬಹುಆಯ್ಕೆಯ ಪ್ರಶ್ನೆಗಳನ್ನೊಳಗೊಂಡಿರುವ 100 ಅಂಕಗಳ ಪ್ರಶ್ನಪತಿಕೆಯನ್ನು ನೀಡಲಾಗುತ್ತದೆ.
ಉತ್ತರವನ್ನು ಒಎಂಆರ್ ಪದ್ಧತಿಯಲ್ಲಿ ಉತ್ತರಿಸುವುದು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಮೆರಿಟ್ ಆಂಕಪಟ್ಟಿ ತಯಾರಿಸಿ ಮೀಸಲಾತಿ ಅನ್ವಯ ಆನ್ಲೈನ್ ಮೂಲಕವೇ ಆಯಾ ವಸತಿ ಶಾಲೆಗಳಿಗೆ ಸೀಟು ಹಂಚಿಕೆ ಮಾಡಲಾಗುವುದು.
ಅಭ್ಯರ್ಥಿಯು ತನ್ನ ಎಸ್ಎಟಿಎಸ್ ಸಂಖ್ಯೆ, ಭಾವಚಿತ್ರ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಹಾಗೂ ಸಂಬಂಧಿತ ಇತರ ದಾಖಲೆಗಳೊಂದಿಗೆ ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ ದಿನಾಂಕ:28.07.2021 ರಿಂದ 10.08.2021 ರ ವರಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ವಸತಿ ಶಾಲಾ ಪ್ರಾಂಶುಪಾಲರನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2451237