ಕ್ರೀಡಾ ತೀರ್ಥಕ್ಷೇತ್ರ ಒಲಿಂಪಿಕ್ ನ ಮಣ್ಣಿನಲ್ಲಿ ಪಾದ ಊರಿದರೂ ಧನ್ಯ ಎಂದಿರುವಾಗ, ಇಲ್ಲಿಬ್ಬರು ಬೆಳ್ಳಿ ಪದಕ ಗೆದ್ದರೂ, ಕಣ್ಣೀರು ಹರಿಸಿ ದೇಶದ ಕ್ಷಮೆ ಯಾಚಿಸಿದ್ದಾರೆ !
ಟೋಕಿಯೋ: ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದೆ. ಕ್ರೀಡಾಕ್ಷೇತ್ರದ ತೀರ್ಥಕ್ಷೇತ್ರ ಒಲಿಂಪಿಕ್ಸಿನಲ್ಲಿ ತನ್ನ ಕಾಲು ಊರಿಸಿ, ಪುಳಕಿತರಾದರೆ ಅಷ್ಟಕ್ಕೇ ಧನ್ಯ ಎಂದುಕೊಂಡಿರುತ್ತಾರೆ ಎಲ್ಲಾ ಕ್ರೀಡಾಪಟುಗಳು. ಅಂತದ್ರಲ್ಲಿ ಚೀನಾದ ಇಬ್ಬರು ಕ್ರೀಡಾಪಟುಗಳು, ತಾವು ಬೆಳ್ಳಿ ಪದಕ ಗೆದ್ದಿದ್ದರೂ, ಕಣ್ಣೀರು ಹಾಕಿಕೊಂಡು ದೇಶದ ಜನತೆಯ ಕ್ಷಮೆ ಕೇಳಿದ್ದಾರೆ. ತಮಗೆ ಚಿನ್ನದ ಪದಕ ಗೆಲ್ಲಕಾಗದಕ್ಕೆ ಚೀನೀ ಜನತೆಯ ಕ್ಷಮೆ ಕೋರಿದ್ದಾರೆ.
ಟೇಬಲ್ ಟೆನ್ನಿಸ್ ಚೀನಾದಲ್ಲಿ ಅತ್ಯಂತ ಪ್ರಸಿದ್ಧ ಆಟ. ಟೇಬಲ್ ಟೆನ್ನಿಸ್ ಅನ್ನು ಒಲಿಂಪಿಕ್ ಸ್ಪರ್ಧೆಯ 1988ರ ಸಿಯೋಲ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸೇರಿಸಿದಾಗಿನಿಂದ 2016ರ ರಿಯೊ ಒಲಿಂಪಿಕ್ ಕ್ರೀಡಾಕೂಟದವರೆಗೆ ಒಟ್ಟು 32 ಚಿನ್ನದ ಪದಕಗಳಲ್ಲಿ ಚೀನಾ ಬರೋಬ್ಬರಿ 28 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡು ಆ ಆಟದಲ್ಲಿ ತನ್ನ ಸಾರ್ವಭೌಮತೆ ಮೆರೆದಿತ್ತು. 2004ರಲ್ಲಿ ಒಮ್ಮೆ ಜೋಡಿ ಟೇಬಲ್ ಟೆನ್ನಿಸ್‌ನಲ್ಲಿ ಚೀನಾ ಚಿನ್ನ ಮಿಸ್ ಮಾಡಿಕೊಂಡಿತ್ತು.
ಅದಾದ ನಂತರ ಸತತ 17 ವರ್ಷಗಳ ಕಾಲ ಟೇಬಲ್ ಟೆನ್ನಿಸ್‌ನಲ್ಲಿ ಚೀನಾ ಚಿನ್ನವನ್ನು ಗೆಲ್ಲುತ್ತಲೇ ಬಂದಿತ್ತು. ಆದರೆ ಈ ವರ್ಷ ದುರಾದೃಷ್ಟವೆಂಬಂತೆ ಟೇಬಲ್ ಟೆನ್ನಿಸ್ ಡಬಲ್ಸ್ ಜೋಡಿ ಫೈನಲ್ಸ್‌ನಲ್ಲಿ ಜಪಾನ್‌ನ ಆಟಗಾರರು ಚೀನಾದ ಆಟಗಾರರನ್ನು ಸೋಲಿಸಿದ್ದಾರೆ. ಚೀನಾಕ್ಕೆ ಚಿನ್ನದ ಬದಲಾಗಿ ಬೆಳ್ಳಿ ಪದಕ ಸಿಕ್ಕಿದೆ. ಸೋತ ಚೀನಾದ ಕ್ರೀಡಾಪಟುಗಳಾದ ಕ್ಷು ಕ್ಸಿನ್ ಮತ್ತು ಲಿಯು ಶಿವೆನ್ ಈ ವಿಚಾರವಾಗಿ ದೇಶದ ಜನತೆಯಲ್ಲಿ ಕ್ಷಮೆ ಯಾಚಿಸಿದ್ದಾರೆ. ನಾವು ಮಾಡಿರುವ ತಪ್ಪಿಗೆ ನೀವು ಬೇಸರವಾಗಬೇಡಿ, ನಮ್ಮನ್ನು ಕ್ಷಮಿಸಿಬಿಡಿ ಎಂದು ಕಣ್ಣೀರಾಗಿದ್ದಾರೆ. ಇದಪ್ಪಾ ಆಟದ ಎಡೆಗಿನ ಅವರ ಸೀರಿಯಸ್ ನೆಸ್ !