ಬದಲಾಯ್ತು ಮೀಸಲಾತಿ ಕೋಟಾ | ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ಕೋರ್ಸ್ ಗಳ ಅಖಿಲ ಭಾರತ ಕೋಟಾದಲ್ಲಿ ಮಹತ್ತರ ಬದಲಾವಣೆ ತಂದ ಕೇಂದ್ರ

ನವದೆಹಲಿ: 2021-22ನೇ ಸಾಲಿನ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅಖಿಲ ಭಾರತ ಕೋಟಾದಲ್ಲಿ ಮಹತ್ವದ ಬದಲಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶ ನೀಡಿದೆ.

 

ಬದಲಾದ ಆದೇಶದಂತೆ ಒಬಿಸಿಗಳಿಗೆ ಶೇ. 27 ಮತ್ತು ಆರ್ಥಿಕ ದುರ್ಬಲ ವರ್ಗಕ್ಕೆ(ಇಡಬ್ಲ್ಯೂಎಸ್) ಶೇ. 10 ರಷ್ಟು ಮೀಸಲಾತಿಯನ್ನು ಸರ್ಕಾರ ಗುರುವಾರ ಪ್ರಕಟಿಸಿದೆ.

ಕಳೆದ ಸೋಮವಾರ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೀರ್ಘಕಾಲದಿಂದ ಬಾಕಿ ಇರುವ ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ನೀಡುವಂತೆ ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

“ಸರ್ಕಾರದ ಈ ನಿರ್ಧಾರದಿಂದ ಎಂಬಿಬಿಎಸ್ ನಲ್ಲಿ ಸುಮಾರು 1,500 ಮತ್ತು ಸ್ನಾತಕೋತ್ತರ ಪದವಿಯಲ್ಲಿ 2,500 ಒಬಿಸಿ ವಿದ್ಯಾರ್ಥಿಗಳಿಗೆ ಸೀಟು ಪಡೆಯುವ ಅವಕಾಶ ಸಿಗಲಿದೆ. ಇನ್ನು ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ನಲ್ಲಿ ಸುಮಾರು 550 ಮತ್ತು ಸ್ನಾತಕೋತ್ತರ ಪದವಿಯಲ್ಲಿ ಸುಮಾರು 1,000 ಸೀಟುಗಳು ಲಭ್ಯವಾಗಲಿವೆ” ಎಂದು ಪ್ರಕಟಣೆ ತಿಳಿಸಿದೆ.

“ಪ್ರಸ್ತುತ ಸರ್ಕಾರವು ಹಿಂದುಳಿದ ವರ್ಗ ಮತ್ತು ಇಡಬ್ಲ್ಯೂಎಸ್ ವರ್ಗಕ್ಕೆ ಸರಿಯಾದ ಮೀಸಲಾತಿ ನೀಡಲು ಬದ್ಧವಾಗಿದೆ.
ಎಐಕ್ಯೂ ಯೋಜನೆಯಲ್ಲಿ ಒಬಿಸಿಗಳಿಗೆ ಶೇ. 27 ಮತ್ತು ಇಡಬ್ಲ್ಯೂಎಸ್ಗೆ ಶೇ. 10 ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ “ಎಂದು ಆರೋಗ್ಯ ಸಚಿವಾಲಯ ಹೇಳಿದೆ.

Leave A Reply

Your email address will not be published.