ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ | ಬೊಮ್ಮಾಯಿ ಆಯ್ಕೆಗೆ ಇದೇ ನೋಡಿ ಪ್ರಮುಖ 6 ಕಾರಣಗಳು

ಬೆಂಗಳೂರು, ಜುಲೈ 28: ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

 

ನಿನ್ನೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ ಬಳಿಕ ಹಂಗಾಮಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಐವರು ನಾಯಕರ ಜೊತೆ ನಿಯೋಜಿತ ಸಿಎಂ ಬೊಮ್ಮಾಯಿ ರಾಜಭವನಕ್ಕೆ ಆಗಮಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ನೂತನ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಗೆ ಮನವಿ ಮಾಡಲಾಗಿದ್ದು, ಸರ್ಕಾರ ರಚನೆಗೆ ರಾಜ್ಯಪಾಲ ಗೆಹ್ಲೋಟ್ ಒಪ್ಪಿಗೆ ಕೂಡ ನೀಡಿದ್ದಾರೆ.

ಅದರಂತೆ ಇಂದು ಬೆಳಗ್ಗೆ 11 ಗಂಟೆಗೆ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬಸವರಾಜ ಬೊಮ್ಮಾಯಿ ಹೆಸರು ಅಂತಿಮ ಆಗಲು ಏನು ಕಾರಣ ?!

ಸಿಎಂ ರೇಸ್‍ನಲ್ಲಿ ಇಂದು ದಿಢೀರ್ ಅಂತ ಬಸವರಾಜ ಬೊಮ್ಮಾಯಿ ಹೆಸರು ಸೇರ್ಪಡೆ ಆಯ್ತು. ಅರವಿಂದ್ ಬೆಲ್ಲದ್, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ, ಮುರುಗೇಶ್ ನಿರಾಣಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಹಲವರ ಹೆಸರು ಸಿಎಂ ರೇಸ್‍ನಲ್ಲಿ ಕೇಳಿಬಂದಿತ್ತು. ಅಂತಿಮವಾಗಿ ಬೆಲ್ಲದ್-ಬೊಮ್ಮಾಯಿ ಹೆಸರು ಫೈನಲ್ ರೇಸ್‍ನಲ್ಲಿ ಉಳಿಯಿತು. ಕೊನೆಗೆ ಯುವ ಮುಖ ಅರವಿಂದ್ ಬೆಲ್ಲದ್ ಅವರನ್ನು ಹಿಂದಿಕ್ಕಿ ಬಸವರಾಜ ಬೊಮ್ಮಾಯಿ ಸಿಎಂ ಗಾದಿಗೆ ಆಯ್ಕೆಯಾದ್ರು. ಈ ಮಧ್ಯೆ ನಿನ್ನೆ ಬೆಳಿಗ್ಗೆ ದಿಡೀರನೆ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಕೆಲವು ಸುದ್ದಿ ಮಾಧ್ಯಮಗಳಂತೂ ಬಿಎಲ್ ಹೆಸರನ್ನು ಫೈನಲ್ ಮಾಡಿದ್ದವು ಘೋಷಣೆಯೊಂದೇ ಬಾಕಿ ಎಂದು ಪ್ರಕಟಿಸಿದ್ದವು.

ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲು ಕಾರಣಗಳು

  • ಕಾರಣ 1 – ರಾಜಕೀಯ ಅನುಭವ, ಚಾಣಾಕ್ಷತನ
  • ಕಾರಣ 2 – ಸಂಯಮಿ, ಮೃದು ಸ್ವಭಾವ
  • ಕಾರಣ 3 – ಬಿಜೆಪಿ ಸೇರಿದ ಮೇಲೆ ತೋರಿದ ಪಕ್ಷ ನಿಷ್ಠೆ
  • ಕಾರಣ 4 – ಬಿಎಸ್‍ವೈ ಕೆಜೆಪಿ ಕಟ್ಟಿದಾಗಲೂ ಬಿಜೆಪಿಯಲ್ಲೇ ಉಳಿದಿದ್ದು
  • ಕಾರಣ 5 – ಬಿಎಸ್ ಯಡಿಯೂರಪ್ಪ ಪರಮಾಪ್ತ, ಅವರನ್ನು ಆಯ್ಕೆ ಮಾಡುವ ಮೂಲಕ ಯಡಿಯೂರಪ್ಪನವರನ್ನು ಕೂಡ ಸಮಾಧಾನ ಪಡಿಸಬಹುದು
  • ಕಾರಣ 6 – ಲಿಂಗಾಯತ ಮುಖಂಡ (ಸಾದರ)

ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ:
28-01-1960 ಹುಬ್ಬಳ್ಳಿಯಲ್ಲಿ ಜನಿಸಿದ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರ ಪುತ್ರ. ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿ.ಇ ಮೆಕ್ಯಾನಿಕಲ್ ಪದವೀಧರರಾಗಿರುವ ಬೊಮ್ಮಾಯಿ ಅವರು ಯುವ ಜನತಾದಳದಿಂದ ರಾಜಕೀಯ ಜೀವನ ಆರಂಭ ಮಾಡಿದ್ದರು. 1996ರಲ್ಲಿ ಸಿಎಂ ಜೆ.ಹೆಚ್.ಪಟೇಲರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 1997, 2003ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ಆಯ್ಕೆ ಆಗಿದ್ದರು. 2008ರಲ್ಲಿ ಬಿಜೆಪಿಗೆ ಸೇರ್ಪಡೆ, ಶಿಗ್ಗಾಂವಿಯಿಂದ ವಿಧಾನಸಭೆಗೆ ಆಯ್ಕೆಯಾದರು ಬಿ.ಎಸ್.ವೈ, ಡಿ.ವಿ.ಎಸ್, ಶೆಟ್ಟರ್ ಸರ್ಕಾರದಲ್ಲಿ ಸಚಿವರಾಗಿದ್ದರು.

ಬಸವರಾಜ ಬೊಮ್ಮಾಯಿ ಅವರ ತಾಯಿ ಗಂಗಮ್ಮ, ಪತ್ನಿ ಚನ್ನಮ್ಮ, ಭರತ್ ಮತ್ತು ಅದಿತಿ ಎಂಬ ಇಬ್ಬರು ಮಕ್ಕಳಿದ್ದಾರೆ.

Leave A Reply

Your email address will not be published.