ಯಡಿಯೂರಪ್ಪನವರು ಮೋದಿ ಟೀಮಿನ ಹೊಸ ಬಲಿಪಶು | ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಟ್ವೀಟ್ | ಮೋದಿ ಬ್ರಿಗೇಡ್ ನಿಂದ ಮೂಲೆಗುಂಪು(!) ಆದವರ ಈ ಪಟ್ಟಿ ನೋಡಿ !!
ನವದೆಹಲಿ: ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಿರುವುದು ಈಗ ವಿಪಕ್ಷ ಕಾಂಗ್ರೆಸ್ ಗೆ ಆಹಾರವಾಗಿ ಪರಿಣಮಿಸಿದೆ. ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ರಾಜೀನಾಮೆ ವಿಷಯವನ್ನು ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಬಳಸಿಕೊಂಡಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರಿಗೆ ಒತ್ತಡ ಹೇರಿ, ಚಿತ್ರಹಿಂಸೆ ಮೂಲಕ ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ದೆಹಲಿಯ ನಿರಂಕುಶಾಧಿಕಾರಿ ಕರ್ನಾಟಕದ ಮುಂದಿನ ಸಿಎಂ ಆಯ್ಕೆ ಮಾಡುತ್ತಾರೆ ಹೊರತು ಬಿಜೆಪಿ ಶಾಸಕರು ಸಿಎಂ ಆಯ್ಕೆ ಮಾಡುತ್ತಿಲ್ಲ. ಹಿರಿಯ ನಾಯಕರನ್ನು ಮೋದಿ ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ. ಅಪಮಾನ ಮಾಡುವುದು ಪ್ರಧಾನಿ ಮೋದಿ ಹಾಗೂ ಬಿಜೆಪಿಯವರಿಗೆ ಅಭ್ಯಾಸವಾಗಿದೆ. ಎಲ್.ಕೆ.ಅಡ್ವಾಣಿಯಿಂದ ಹಿಡಿದು ಬಿ ಎಸ್ ವೈ ವರೆಗೂ ಅವಮಾನ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಟ್ವಿಟ್ ಮಾಡಿದ್ದಾರೆ.
ಮೋದಿ ಅವರು ಯಡಿಯೂರಪ್ಪ ಅವರಿಗೆ ಮಾಡಿದ ಅವಮಾನ, ಹಿಂಸೆ ರಾಜೀನಾಮೆ ನೀಡುವುದಕ್ಕೆ ಕಾರಣವಾಗಿದ್ದು ಒತ್ತಾಯಪೂರ್ವಕ ರಾಜೀನಾಮೆ ನೀಡುವ ಸಾಲಿನಲ್ಲಿ ಯಡಿಯೂರಪ್ಪ ಮೋದಿ ಅವರ ಇತ್ತೀಚಿನ ಬಲಿಪಶುವಾಗಿದ್ದಾರೆ.
ಮೋದಿಯಿಂದ ಸಂತ್ರಸ್ತರಾದವರ ಪಟ್ಟಿ ದೊಡ್ಡದಿದೆ. ಎಲ್.ಕೆ.ಅಡ್ವಾಣಿ, ಎಂ.ಎಂ.ಜೋಶಿ, ಕೆಶುಭಾಯ್ ಪಟೇಲ್, ಶಾಂತಾಕುಮಾರ್, ಯಶವಂತ ಸಿನ್ಹಾ ಸೇರಿ ಹಲವರಿಗೆ ನಿವೃತ್ತಿ ಕೊಡಿಸಿದರು. ಸುಷ್ಮಾ ಸ್ವರಾಜ್, ಸುಮಿತ್ರಾ ಮಹಾಜನ್, ಉಮಾಭಾರತಿ, ಸಿ.ಪಿ.ಠಾಕೂರ್, ಎ.ಕೆ.ಪಟೇಲ್, ಹರೇನ್ ಪಾಂಡ್ಯ ಕಲ್ಯಾಣ್ ಸಿಂಗ್, ಡಾ.ಹರ್ಷವರ್ಧನ್, ರವಿಶಂಕರ್ ಪ್ರಸಾದ್, ಸುಶೀಲ್ ಮೋದಿ ಈಗ ಬಿ ಎಸ್ ಯಡಿಯೂರಪ್ಪ ಹೀಗೆ ಎಲ್ಲರೂ ಬಲವಂತದಿಂದ ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ಬಿಜೆಪಿ ನಾಯಕರ ಇಂತಹ ನಡೆ ಸರಿಯಲ್ಲ. ಮೋದಿ ಬ್ರಿಗೇಡ್ ನಿಂದಾಗಿ ಇವರೆಲ್ಲಾ ಇಂದು ನೇಪಥ್ಯಕ್ಕೆ ಸರಿಯುವಂತೆ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.